‘‘ಪ್ರಧಾನಿ ಮೋದಿ ಮಾತನಾಡಬೇಕು": ಖಾಮಿನೈ ಹತ್ಯೆ ಬಗ್ಗೆ ಸರಕಾರದ ಮೌನವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ
"ಮಾನವ ಜೀವಗಳ ಪರವಾಗಿ ಮಾತನಾಡುವ ಧೈರ್ಯ ಬೇಕು"
ನರೇಂದ್ರ ಮೋದಿ(PTI), ರಾಹುಲ್ ಗಾಂಧಿ(PTI) , ಆಯತುಲ್ಲಾ ಖಾಮಿನೈ(AP)
ಹೊಸದಿಲ್ಲಿ: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಖಾಮಿನೈ ಮೃತಪಟ್ಟಿರುವ ಬಗ್ಗೆ ಸರಕಾರದ ಮೌನವನ್ನು ಕಾಂಗ್ರೆಸ್ ಮಂಗಳವಾರ ಖಂಡಿಸಿದೆ.
ಪಶ್ಚಿಮ ಏಶ್ಯದಲ್ಲಿ ನೆಲೆಸಿರುವ ಬಿಕ್ಕಟ್ಟನ್ನು ಉಲ್ಲೇಖಿಸುತ್ತಾ, ಖಾಮಿನೈ ಅವರ ಹತ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಅನುಮೋದಿಸುತ್ತಾರೆಯೇ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದರು.
‘‘ಪ್ರಧಾನಿ ಮೋದಿ ಮಾತನಾಡಬೇಕು. ವಿಶ್ವ ವ್ಯವಸ್ಥೆಯೊಂದನ್ನು ರೂಪಿಸುವ ವಿಧಾನವಾಗಿ ದೇಶವೊಂದರ ಮುಖ್ಯಸ್ಥರನ್ನು ಹತ್ಯೆ ಮಾಡುವುದನ್ನು ಅವರು ಬೆಂಬಲಿಸುತ್ತಾರೆಯೇ? ಅವರ ಮೌನವು ಜಗತ್ತಿನಲ್ಲಿ ಭಾರತದ ವರ್ಚಸ್ಸನ್ನು ಕುಗ್ಗಿಸುತ್ತದೆ’’ ಎಂದು ರಾಹುಲ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶದಲ್ಲಿ ಹೇಳಿದ್ದಾರೆ.
ಪರಿಸ್ಥಿತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಅವರು, ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ವೈರತ್ವವು ಈಗಾಗಲೇ ಜರ್ಝರಿತಗೊಂಡಿರುವ ವಲಯವೊಂದನ್ನು ದೊಡ್ಡ ಸಂಘರ್ಷವೊಂದರತ್ತ ತಳ್ಳುತ್ತಿದೆ ಎಂದು ಹೇಳಿದರು.
ಎರಡೂ ಕಡೆಗಳಿಂದ ನಡೆದಿರುವ ದಾಳಿಗಳನ್ನು ಖಂಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
‘‘ಸುಮಾರು ಒಂದು ಕೋಟಿ ಭಾರತೀಯರು ಸೇರಿದಂತೆ ಕೋಟಿಗಟ್ಟಳೆ ಜನರು ಅಸ್ಥಿರತೆಯನ್ನು ಎದುರಿಸುತ್ತಿದ್ದಾರೆ. ಜನರು ಭಯದ ನೆರಳಲ್ಲಿ ಬದುಕುತ್ತಿದ್ದಾರೆ. ದೇಶಗಳ ಸಾರ್ವಭೌಮತೆಯನ್ನು ಉಲ್ಲಂಘಿಸುತ್ತಿರುವ ದಾಳಿಗಳು ಬಿಕ್ಕಟ್ಟನ್ನು ಬಿಗಡಾಯಿಸುತ್ತಿವೆ. ಇರಾನ್ ಮೇಲೆ ನಡೆದ ಏಕಪಕ್ಷೀಯ ದಾಳಿಗಳು ಹಾಗೂ ಇತರ ಮಧ್ಯಪ್ರಾಚ್ಯ ದೇಶಗಳ ಮೇಲೆ ಇರಾನ್ ನಡೆಸಿರುವ ದಾಳಿಗಳನ್ನು ಖಂಡಿಸಬೇಕಾಗಿದೆ. ಹಿಂಸೆಯಿಂದ ಹಿಂಸೆಯೇ ಹುಟ್ಟಿಕೊಳ್ಳುತ್ತದೆ. ಶಾಂತಿಯ ಏಕೈಕ ದಾರಿ ಮಾತುಕತೆ ಮತ್ತು ಸಂಯಮವಾಗಿದೆ’’ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ಭಾರತವು ನೈತಿಕವಾಗಿ ಸ್ಪಷ್ಟತೆಯನ್ನು ಹೊಂದಬೇಕು ಎಂದು ಅವರು ಹೇಳಿದರು. ‘‘ಅಂತರ್‌ರಾಷ್ಟ್ರೀಯ ಕಾನೂನು ಮತ್ತು ಮಾನವ ಜೀವಗಳ ಪರವಾಗಿ ಸ್ಪಷ್ಟವಾಗಿ ಮಾತನಾಡುವ ಧೈರ್ಯ ನಮ್ಮಲ್ಲಿರಬೇಕು. ಸಾರ್ವಭೌಮತೆ ಮತ್ತು ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ತತ್ವಗಳ ನೆಲೆಗಟ್ಟನ್ನು ನಮ್ಮ ವಿದೇಶ ನೀತಿ ಹೊಂದಿದೆ’’ ಎಂದು ಅವರು ಹೇಳಿದ್ದಾರೆ.