×
Ad

ʼಭಾರತ್ ಜೋಡೊ ನ್ಯಾಯ ಯಾತ್ರೆʼಗೆ ಚಾಲನೆ ನೀಡಿದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ

Update: 2024-01-14 16:54 IST

ರಾಹುಲ್ ಗಾಂಧಿ,ಮಲ್ಲಿಕಾರ್ಜುನ ಖರ್ಗೆ | Photo: X \ @INCIndia

ಇಂಫಾಲ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ತ್ರಿವರ್ಣ ಧ್ವಜವನ್ನು ಬೀಸುವ ಮೂಲಕ ಇಂದು ಮಣಿಪುರದಲ್ಲಿ 15 ರಾಜ್ಯಗಳ ಮೂಲಕ ಹಾದು ಹೋಗಲಿರುವ ಭಾರತ್ ಜೋಡೊ ನ್ಯಾಯ ಯಾತ್ರೆಗೆ ಚಾಲನೆ ನೀಡಿದರು.

ಲೋಕಸಭಾ ಚುನಾವಣೆಗೂ ಮುನ್ನ ಪ್ರಾರಂಭಗೊಂಡಿರುವ ಈ ಯಾತ್ರೆಯು ಮಣಿಪುರವಲ್ಲದೆ, ಇನ್ನಿತರ ನಾಲ್ಕು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ (257 ಕಿಮೀ), ಅರುಣಾಚಲ ಪ್ರದೇಶ (55 ಕಿಮೀ), ಮೇಘಾಲಯ (ಐದು ಕಿಮೀ) ಹಾಗೂ ಅಸ್ಸಾಂ (833 ಕಿಮೀ) ಮೂಲಕವೂ ಹಾದು ಹೋಗಲಿದೆ. ಈ ಯಾತ್ರೆಯಲ್ಲಿ 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳನ್ನು ಕ್ರಮಿಸಲಾಗುತ್ತದೆ. ನಂತರ ಈ ಯಾತ್ರೆಯು ಪಶ್ಚಿಮ ಬಂಗಾಳ, ಬಿಹಾರ, ಝಾರ್ಖಂಡ್, ಒಡಿಶಾ, ಛತ್ತೀಸ್ ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮೂಲಕ ಹಾದುಹೋಗಿ, ಮಹಾರಾಷ್ಟ್ರವನ್ನು ತಲುಪಲಿದೆ.

ಭಾರತ್ ಜೋಡೊ ನ್ಯಾಯ ಯಾತ್ರೆಗೆ ಚಾಲನೆ ನೀಡುವುದಕ್ಕೂ ಮುನ್ನ, ರಾಹುಲ್ ಗಾಂಧಿ ಅವರು 1981ರಲ್ಲಿ ನಡೆದಿದ್ದ ಆಂಗ್ಲೊ-ಮಣಿಪುರ ಯುದ್ಧದಲ್ಲಿ ಮಡಿದಿದ್ದವರ ಸ್ಮರಣಾರ್ಥ ಥೌಬಲ್ ನಲ್ಲಿ ನಿರ್ಮಿಸಲಾಗಿರುವ ಖೋಂಗ್ ಜೋಮ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು.

ಪಕ್ಷವು ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಯಾತ್ರೆಯು ಉತ್ತರ ಪ್ರದೇಶದಲ್ಲಿ 1,074 ಕಿಮೀಯನ್ನು ಕ್ರಮಿಸುವ ಮೂಲಕ ಅತ್ಯಂತ ಸುದೀರ್ಘ ಹಾದಿಯನ್ನು ಹಾದು ಹೋಗಲಿದೆ. ಅಮೇಥಿ, ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್ ಬರೇಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿ ಸೇರಿದಂತೆ ರಾಜಕೀಯ ಪ್ರಾಮುಖ್ಯತೆ ಹೊಂದಿರುವ ಪ್ರದೇಶಗಳಲ್ಲಿ ಈ ಯಾತ್ರೆಯು 11 ದಿನಗಳ ಕಾಲ ನಡೆಯಲಿದೆ. ಈ ಯಾತ್ರೆ ಬಹುತೇಕ ಬಸ್ ಪ್ರಯಾಣದ ಮೂಲಕ 6,713 ಕಿಮೀಯನ್ನು ಕ್ರಮಿಸಲಿದ್ದು, ಇದರೊಂದಿಗೆ ಕಾಲ್ನಡಿಗೆಯೂ ಇರಲಿದೆ.

ಮಾರ್ಚ್ 20 ಅಥವಾ 21ಕ್ಕೆ ಸಮಾರೋಪಗೊಳ್ಳುವುದಕ್ಕೂ ಮುನ್ನ, ಈ ಯಾತ್ರೆಯು 110 ಜಿಲ್ಲೆಗಳಲ್ಲಿ 67 ದಿನಗಳ ಕಾಲ ನಡೆಯಲಿದೆ. ಈ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರತಿ ದಿನ ಎರಡು ಬಾರಿ ಸಾರ್ವಜನಿಕ ಸಭೆಗಳು ಹಾಗೂ ಸಾಮಾಜಿಕ ಸಂಘಟನೆಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಇದಕ್ಕೂ ಮುನ್ನ, ಸೆಪ್ಟೆಂಬರ್ 7, 2022ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿದ್ದ ಸುಮಾರು 4,080 ಕಿಮೀ ಉದ್ದದ ಪಾದಯಾತ್ರೆಗೆ ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉಪಸ್ಥಿತರಿದ್ದರು.

ಕೋಮುವಾದ, ನಿರುದ್ಯೋಗ, ಹಣದುಬ್ಬರ ಹಾಗೂ ರಾಜಕೀಯ ಕೇಂದ್ರೀಕರಣದ ವಿರುದ್ಧ ಹೋರಾಡುವ ಉದ್ದೇಶದೊಂದಿಗೆ ಪ್ರಾರಂಭವಾಗಿದ್ದ ಈ ಯಾತ್ರೆಯು 150 ದಿನಗಳ ಸುದೀರ್ಘ ಪಾದಯಾತ್ರೆಯ ನಂತರ ಜನವರಿ 29ರಂದು ಶ‍್ರೀನಗರದ ಲಾಲ್ ಚೌಕ್ ನಲ್ಲಿ ಸಮಾರೋಪಗೊಂಡಿತ್ತು. ಈ ಯಾತ್ರೆಯು ಒಟ್ಟು 14 ರಾಜ್ಯಗಳ ಮೂಲಕ ಸಾಗಿ ಕಾಶ‍್ಮೀರದಲ್ಲಿ ಸಮಾರೋಪಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News