×
Ad

ದಿಲ್ಲಿ ಕಾಲ್ತುಳಿತ | ಜೀವ ರಕ್ಷಕ ಪೋರ್ಟರ್ ಗಳನ್ನು ಭೇಟಿಯಾದ ವಿಪಕ್ಷ ನಾಯಕ ರಾಹುಲ್ ಗಾಂಧಿ

Update: 2025-03-02 12:09 IST

Photo:x/@RahulGandhi

ಹೊಸದಿಲ್ಲಿ: ಮಹಾಕುಂಭ ಮೇಳಕ್ಕೆ ತೆರಳಲು ಫೆ.15ರಂದು ಹೊಸದಿಲ್ಲಿ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ವೇಳೆ ಉಂಟಾದ ಕಾಲ್ತುಳಿತದಿಂದ 18 ಮಂದಿ ಮೃತಪಟ್ಟಿದ್ದರು. ಈ ವೇಳೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಪೋರ್ಟರ್ ಗಳು ಮಾನವೀಯತೆಯಿಂದ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿ ಹಲವರ ಜೀವ ಉಳಿಸಿದ್ದರು. ಅವರನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚಿಗೆ ಭೇಟಿಯಾಗಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು , ‘ದಿಲ್ಲಿಯ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಸಂದರ್ಭದಲ್ಲಿ ಪೋರ್ಟರ್ ವೃತ್ತಿ ನಡೆಸುವವರು ಸ್ವಯಂ ಪ್ರೇರಣೆಯಿಂದ ಕಾರ್ಯಪ್ರವೃತ್ತರಾಗಿ ಹಲವರ ಜೀವ ಉಳಿಸಿದ್ದಾರೆ. ಅದಕ್ಕಾಗಿ ದೇಶದ ಪರವಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದೆ’ ಎಂದು ತಿಳಿಸಿದ್ದಾರೆ.

‘ಸಾಮಾನ್ಯವಾಗಿ ಮಾನವೀಯತೆಯ ಬೆಳಕು ಕತ್ತಲೆಯ ಸಮಯದಲ್ಲೇ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ. ಇದಕ್ಕೆ ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ವೃತ್ತಿಯ ಮೂಲಕ ಬದುಕು ಕಟ್ಟಿಕೊಂಡಿರುವ ಸಹೋದರರೇ ಸ್ಪಷ್ಟ ಉದಾಹರಣೆ. ಈ ದುರ್ಘಟನೆಯಿಂದ ಕೇಂದ್ರ ಸರ್ಕಾರ ಪಾಠ ಕಲಿಯಬೇಕಿದೆ. ಭವಿಷ್ಯದಲ್ಲಿ ಇಂಥ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಬೇಕು. ಯೋಜನಾಬದ್ಧ ಮುನ್ನೆಚ್ಚರಿಕಾ ಕ್ರಮ ಅಳವಡಿಸಳ್ಳಬೇಕು. ಆ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು”, ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

‘ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇಂಥ ದುರ್ಘಟನೆಗಳನ್ನು ತಡೆಯಲು, ಹೆಚ್ಚು ಜನಸಂದಣಿಯನ್ನು ನಿಯಂತ್ರಿಸುವ ಪ್ರಯತ್ನವನ್ನು ರೈಲ್ವೆ ಇಲಾಖೆ ನಡೆಸಬೇಕು. ಮೂಲಸೌಕರ್ಯವನ್ನು ಇನ್ನಷ್ಟು ಉತ್ತಮಪಡಿಸಬೇಕು. ತುರ್ತು ಸಂದರ್ಭದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ಇದೆ’ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News