ಕೇರಳ | ಅತ್ಯಾಚಾರ ಆರೋಪ ಎದುರಿಸುತ್ತಿರುವ ಶಾಸಕ ರಾಹುಲ್ ಮಾಂಕೂಟತ್ತಿಲ್ ರನ್ನು ಪಕ್ಷದಿಂದ ವಜಾಗೊಳಿಸಿದ ಕಾಂಗ್ರೆಸ್
ರಾಹುಲ್ ಮಾಂಕೂಟತ್ತಿಲ್ | Photo Credit : indiatoday.in
ಹೊಸದಿಲ್ಲಿ: ಅತ್ಯಾಚಾರ ಆರೋಪವನ್ನು ಎದುರಿಸುತ್ತಿರುವ ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್ ರನ್ನು ಕಾಂಗ್ರೆಸ್ ಪಕ್ಷವು ಗುರುವಾರ ಪಕ್ಷದಿಂದ ಉಚ್ಚಾಟಿಸಿದೆ. ಅಮಾನತಿನಲ್ಲಿದ್ದ ಶಾಸಕನನ್ನು ಪಕ್ಷವು ತನ್ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದೆ.
ಅಮಾನತಿನಲ್ಲಿರುವ ಶಾಸಕ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳದ ನ್ಯಾಯಾಲಯವೊಂದು ತಿರಸ್ಕರಿಸಿದ ಸ್ವಲ್ಪವೇ ಸಮಯದ ಬಳಿಕ ಈ ಬೆಳವಣಿಗೆ ನಡೆದಿದೆ.
ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಇರುವ ಆರೋಪಗಳ ಬಗ್ಗೆ ಪಕ್ಷವು ಪರಿಶೀಲನೆ ನಡೆಸಿದೆ ಹಾಗೂ ಅವರು ಇನ್ನು ಪಕ್ಷದಲ್ಲಿ ಮುಂದುವರಿಯಬಾರದು ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸನ್ನಿ ಜೋಸೆಫ್ ಗುರುವಾರ ಹೊರಡಿಸಿರುವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಪಾಲಕ್ಕಾಡ್ ಶಾಸಕ ಮಾಂಕೂಟತ್ತಿಲ್ ವಿರುದ್ಧ ಹಲವು ಮಹಿಳೆಯರು ಲೈಂಗಿಕ ದುರ್ವರ್ತನೆಯ ಆರೋಪ ಹೊರಿಸಿದ ಬಳಿಕ ಅವರನ್ನು ಆಗಸ್ಟ್‌ನಲ್ಲಿ ಕೆಪಿಸಿಸಿಯಿಂದ ಅಮಾನತುಗೊಳಿಸಲಾಗಿತ್ತು.
ಪ್ರಭಾವಿ ಯುವ ರಾಜಕಾರಣಿಯೊಬ್ಬ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದು, ಹೊಟೇಲ್ ಕೋಣೆಗೆ ಆಹ್ವಾನಿಸುತ್ತಿದ್ದಾನೆ ಎಂಬುದಾಗಿ ನಟಿ ರಿನಿ ಆ್ಯನ್ ಜಾರ್ಜ್ ಆಗಸ್ಟ್ ತಿಂಗಳಿನಲ್ಲಿ ಆರೋಪಿಸಿದ್ದರು.
ಆ ಬಳಿಕ, ಹಲವು ಮಹಿಳೆಯರು ಶಾಸಕನ ವಿರುದ್ಧ ಇದೇ ಆರೋಪಗಳನ್ನು ಮಾಡಿದ್ದರು.