×
Ad

1,500 ಮಕ್ಕಳನ್ನು ರಕ್ಷಿಸಿದ ಯುಪಿ ಆರ್‌ಪಿಎಫ್ ಅಧಿಕಾರಿಗೆ ರೈಲ್ವೆ ಅತ್ಯುನ್ನತ ಗೌರವ

Update: 2026-01-18 08:04 IST

PC | timesofindia

ಮೀರಠ್ : ಕಳೆದು ಹೋಗುವ, ಕಳ್ಳಸಾಗಾಣಿಕೆದಾರರ ಬಲೆಗೆ ಬೀಳುವ, ಉದ್ಯೋಗದ ಆಮಿಷಕ್ಕೆ ಬಲೆ ಬಿದ್ದ ಹಾಗೂ ಮನೆ ಬಿಟ್ಟು ಓಡಿಬರುವ ಮಕ್ಕಳು ಹೀಗೆ ಪ್ರತಿವಾರ ರೈಲು ನಿಲ್ದಾಣಗಳಲ್ಲಿ ಹಲವು ಮಕ್ಕಳು ಕಾಣೆಯಾಗುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ರೈಲ್ವೆ ಸುರಕ್ಷಾ ಪಡೆಯ ಇನ್‌ಸ್ಪೆಕ್ಟರ್ ಚಂದನಾ ಸಿನ್ಹಾ ಉತ್ತರ ಪ್ರದೇಶದ ರೈಲ್ವೆ ಜಾಲದಲ್ಲಿ ಇಂಥ 1,500ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿ, ರೈಲ್ವೆಯ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇವರ ನೇತೃತ್ವದ ತಂಡ 2024ರಲ್ಲೇ 494 ಮಕ್ಕಳನ್ನು ರಕ್ಷಿಸಿದ್ದು, ಇವರಲ್ಲಿ ಬಾಲಕಾರ್ಮಿಕರಾಗಲು ಕಳ್ಳಸಾಗಾಣಿಕೆದಾರರ ಜಾಲಕ್ಕೆ ಬಿದ್ದ 41 ಮಕ್ಕಳೂ ಸೇರಿದ್ದಾರೆ. ಈ ಪೈಕಿ 152 ಮಕ್ಕಳನ್ನು ಇವರು ಸ್ವತಃ ರಕ್ಷಿಸಿದ್ದಾರೆ. ಈ ಸಾಧನೆಗಾಗಿ ಇವರಿಗೆ ಭಾರತೀಯ ರೈಲ್ವೆ ನಿಡುವ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರವನ್ನು ಜ.9ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಲಕ್ನೋ ರೈಲು ನಿಲ್ದಾಣದ 3ನೇ ಪ್ಲಾಟ್‍ಫಾರಂನಲ್ಲಿ ಒಂದು ಮಗು ಒಬ್ಬಂಟಿಯಾಗಿ ಇದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ ತಕ್ಷಣವೇ ಕರ್ತವ್ಯಕ್ಕೆ ಹಾಜರಾದರು.

ಅಧಿಕಾರಿಯ ಕ್ರಮವನ್ನು ಮಾತ್ರವಲ್ಲದೇ ಎಲ್ಲ ಪ್ಲಾಟ್‍ಫಾರಂ ಹಾಗೂ ಮಕ್ಕಳು ಕಳೆದುಹೋಗುವ ಸ್ಥಳಗಳಲ್ಲಿ ಸದ್ದುಗದ್ದಲವಿಲ್ಲದೇ ರಕ್ಷಿಸುವ ಜಾಲವನ್ನು ಅಭಿವೃದ್ಧಿಪಡಿಸಿರುವುದನ್ನು ಗುರುತಿಸಲಾಗಿದೆ. ಲಕ್ನೋದ ಚಾರ್‍ಭಾಗ್‍ನಿಂದ ಇವರು ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಒಂದು ಕಾಣೆಯಾದ ಮಗು ಮತ್ತು ಒಂದು ಸಂಶಯಾಸ್ಪದ ಪ್ರಯಾಣಿಕನಿಂದ ಇವರ ಯಶೋಗಾಥೆ ಆರಂಭವಾಗಿದ್ದು, ಬಳಿಕ ರಕ್ಷಣಾ ಜಾಲ ವ್ಯವಸ್ಥಿತವಾಗಿ ಬೆಳೆದಿದೆ. ಅಧಿಕಾರಿಗಳಿಗೆ ಪ್ಲಾಟ್‍ಫಾರಂ ಚಲನವಲನಗಳ ಬಗ್ಗೆ ನಿಗಾ ಇಡುವ ತರಬೇತಿ, ಮಾಹಿತಿದಾರರ ಜಾಲ, ಎನ್‍ಜಿಓ ಪಾಲುದಾರಿಕೆ ಬೆಳೆಸಿರುವುದು ಹೀಗೆ ರಕ್ಷಣಾ ಜಾಲವನ್ನು ಅತಿ ವಿಶಿಷ್ಟವಾಗಿ ಅಭಿವೃದ್ಧಿಪಡಿಸಿದರು ಎಂದು ತಿಳಿದು ಬಂದಿದೆ.

ನವದೆಹಲಿ ರೈಲು ನಿಲ್ದಾಣಕ್ಕೆ 2022ರಲ್ಲಿ ನಿಯೋಜಿತರಾದ ಬಳಿಕ ಈ ಪ್ರಯತ್ನ ಮತ್ತಷ್ಟು ತೀಕ್ಷ್ಣವಾಯಿತು. ಛಾತ್‍ಪೂಜಾ ಗದ್ದಲದಲ್ಲಿ ಕಳೆದುಹೋದ ಮಹಿಳೆ ಮತ್ತು ಮೂರು ವರ್ಷದ ಮಗನನ್ನು ಪತ್ತೆ ಮಾಡಿದರು. ಬಳಿಕ 2024ರಲ್ಲಿ ಅವರನ್ನು ರೈಲ್ವೆ ಇಲಾಖೆಯ ಮಕ್ಕಳ ರಕ್ಷಣಾ ಉಪಕ್ರಮದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಬಿಹಾರದಿಂದ ಪಂಜಾಬ್, ಹರ್ಯಾಣ ಹೀಗೆ ದೇಶದ ಉದ್ದಗಲಕ್ಕೂ ಕಳ್ಳಸಾಗಾಣಿಕೆದಾರರ ಜಾಲವನ್ನು ಬೇಧಿಸಿ ಹಲವು ಮಕ್ಕಳನ್ನು ಇವರ ಘಟಕ ರಕ್ಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News