×
Ad

ಮುಂಗಾರು ಆರಂಭದಲ್ಲೇ ಈಶಾನ್ಯದಲ್ಲಿ ಮಳೆ ಅವಾಂತರ: 32 ಮಂದಿ ಮೃತ್ಯು

Update: 2025-06-01 07:45 IST

PC: x.com/guwahatinews

ಗುವಾಹತಿ: ಮುಂಗಾರು ಋತುವಿನ ಆರಂಭದಲ್ಲೇ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ ಹಾಗೂ ಭೂಕುಸಿತದಿಂದ ವ್ಯಾಪಕ ಹಾನಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಕನಿಷ್ಠ 32 ಮಂದಿ ಮಳೆ ಸಂಬಧಿ ಅನಾಹುತಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಬಾಂಗ್ಲಾದೇಶ ಮತ್ತು ಪಕ್ಕದ ಮೇಘಾಲಯದಲ್ಲಿ ವಾಯುಭಾರ ಕುಸಿತದಿಂದ ಐದು ಈಶಾನ್ಯ ರಾಜ್ಯಗಳಲ್ಲಿ ಬಹಳಷ್ಟು ಮನೆಗಳು ಧರಾಶಾಯಿಯಾಗಿವೆ. ಪ್ರವಾಹದ ನೀರು ಬಹಳಷ್ಟು ಪ್ರದೇಶಗಳನ್ನು ವ್ಯಾಪಿಸಿ ಕಲ್ಲುಬಂಡೆಗಳ ಪತನ ಮತ್ತು ಮಣ್ಣು ಕುಸಿತದ ಘಟನೆಗಳು ವರದಿಯಾಗಿವೆ.

ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರೀ ಹಾನಿ ಮತ್ತು ಸಾವು ನೋವು ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಸ್ಸಾಂನಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಉತ್ತರ ಅಸ್ಸಾಂನ ರಂಗದಾನಿ ಅಣೆಕಟ್ಟಿನಿಂದ ಹೆಚ್ಚಿನ ನೀರು ಬಿಟ್ಟ ಪರಿಣಾಮ ನೆರೆಯ ಅರುಣಾಚಲ ಪ್ರದೇಶದ ಹಲವು ಗ್ರಾಮಗಳು ಮುಳುಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಗುವಾಹತಿಯ ಬೊಂಡಾ ಪ್ರದೇಶದಲ್ಲಿ ಭೂಕುಸಿತದಿಂದ ಮೂವರು ಮಕ್ಕಳು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ.

ಗೋಲಘಾಟ್ನಲ್ಲಿ ಮಗು ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿರುವುದನ್ನು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ದೃಢಪಡಿಸಿದ್ದು, ರಾಜ್ಯದ ಹನ್ನೆರಡು ಜಿಲ್ಲೆಗಳು ಪ್ರವಾಹಪೀಡಿತವಾಗಿವೆ ಎಂದು ವಿವರಿಸಿದೆ. ರಾಜ್ಯದಲ್ಲಿ 366 ಬೆಟ್ಟ ಪ್ರದೇಶಗಳು ಭೂಕುಸಿತದ ಅಪಾಯ ಎದುರಿಸುತ್ತಿದ್ದು, ಜನ ಭೀತಿಯ ನೆರಳಲ್ಲಿ ಬದುಕುತ್ತಿದ್ದಾರೆ. ಗುವಾಹತಿಯಲ್ಲಿ ಕಳೆದ 24 ಗಂಟೆಗಳಲ್ಲಿ 111 ಮಿಲಿಮೀಟರ್ ಮತ್ತು ತೇಜಪುರದಲ್ಲಿ 174 ಮಿಲಿಮೀಟರ್ ಮಳೆ ಬಿದ್ದಿದೆ.

ಅರುಣಾಚಲ ಪ್ರದೇಶದ ಬನಾ-ಸೆಪ್ಪಾ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಪ್ರವಾಹ ನೀರಿನಲ್ಲಿ ವಾಹನ ಕೊಚ್ಚಿಕೊಂಡು ಸಂಭವಿಸಿದ ದುರಂತದಲ್ಲಿ ಎರಡು ಕುಟುಂಬಗಳ ಏಳು ಮಂದಿ ನೀರುಪಾಲಾಗಿದ್ದಾರೆ. ಮೇಘಾಲಯದಲ್ಲಿ ಕಳೆದ 24 ಗಂಟೆಗಳಲ್ಲಿ ಭೂಕುಸಿತ, ಸಿಡಿಲು ಮತ್ತು ನೀರಿನಲ್ಲಿ ಮುಳುಗಿ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಚಿರಾಪುಂಜಿ ಮತ್ತು ಮೌಸಿನ್ರಾಂನಲ್ಲಿ ಒಂದೇ ದಿನ 47 ಸೆಂಟಿಮೀಟರ್ ಮಳೆ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News