×
Ad

ರಾಜಸ್ಥಾನ | ಜೂಜಾಟವಾದ ಶೇರು ವ್ಯವಹಾರದ ಗೀಳು; 3 ವರ್ಷಗಳಲ್ಲಿ 41 ಗ್ರಾಹಕರಿಗೆ 4.5 ಕೋ.ರೂ.ವಂಚಿಸಿದ ಬ್ಯಾಂಕ್ ಉದ್ಯೋಗಿ!

Update: 2025-06-06 21:47 IST

ಸಾಂದರ್ಭಿಕ ಚಿತ್ರ

 

ಜೈಪುರ: ಶೇರು ವ್ಯವಹಾರದ ಗೀಳಿನಿಂದಾಗಿ 41 ಗ್ರಾಹಕರಿಗೆ 4.5 ಕೋ.ರೂ.ಗಳ ಪಂಗನಾಮ ಹಾಕಿರುವ ಐಸಿಐಸಿಐ ಬ್ಯಾಂಕಿನ ಕೋಟಾ ಶಾಖೆಯ ಮಾಜಿ ಗ್ರಾಹಕ ಸಂಪರ್ಕ ವ್ಯವಸ್ಥಾಪಕಿಯನ್ನು ಪೋಲಿಸರು ಬಂಧಿಸಿದ್ದಾರೆ.

ಸಾಕ್ಷಿ ಗುಪ್ತಾ(26) ಬಂಧಿತ ಆರೋಪಿಯಾಗಿದ್ದು, ಸಂತ್ರಸ್ತರಲ್ಲಿ ಹೆಚ್ಚಿನವರು ವೃದ್ಧ ಗ್ರಾಮಸ್ಥರಾಗಿದ್ದಾರೆ. ಬ್ಯಾಂಕ್ ಫಾರ್ಮ್‌ಗಳಲ್ಲಿ ಸಣ್ಣ ಅಕ್ಷರಗಳಲ್ಲಿ ಮುದ್ರಿತ ಮಾಹಿತಿಗಳ ಪರಿಚಯವಿಲ್ಲದ ಅವರಿಗೆ ದಾಖಲೆಯ ಬಗ್ಗೆ ತಿಳುವಳಿಕೆಯೂ ಕಡಿಮೆ, ಹೀಗಾಗಿ ತಮಗೆ ಸಹಾಯ ಮಾಡಲೆಂದೇ ಇದ್ದ ಸಾಕ್ಷಿಯನ್ನು ಸಂಪೂರ್ಣವಾಗಿ ನಂಬಿದ್ದರು.

ಗ್ರಾಹಕರು ತನ್ನಲ್ಲಿಟ್ಟಿದ್ದ ವಿಶ್ವಾಸ ಮತ್ತು ಅವರ ತಿಳುವಳಿಕೆ ಕೊರತೆಯನ್ನು ಸಾಕ್ಷಿ ದುರ್ಬಳಕೆ ಮಾಡಿಕೊಂಡಿದ್ದಳು. ಮೂರು ವರ್ಷಗಳ ಕಾಲ ನಿರಂತರವಾಗಿ ಆಕೆ ಅವರನ್ನು ವಂಚಿಸಿದ್ದು, ಬ್ಯಾಂಕಿನ ಇತರ ಅಧಿಕಾರಿಗಳಿಗೆ ಇದು ಗೊತ್ತೇ ಆಗಿರಲಿಲ್ಲ.

ಈಗ ನ್ಯಾಯಾಂಗ ಬಂಧನದಲ್ಲಿರುವ ಸಾಕ್ಷಿ ಅವರ ಮೊಬೈಲ್ ಸಂಖ್ಯೆಗಳನ್ನು ತನ್ನ ಸ್ವಂತ ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆಗಳಿಗೆ ಬದಲಿಸಲು ನಿಗದಿತ ಫಾರ್ಮ್‌ಗಳ ಮೇಲೆ ಗ್ರಾಹಕರ ಸಹಿಗಳನ್ನು ಹಾಕಿಸಿಕೊಳ್ಳುತ್ತಿದ್ದಳು. ಕೆಲವು ಪ್ರಕರಣಗಳಲ್ಲಿ ಸ್ವತಃ ಹೊಸ ಮೊಬೈಲ್ ಸಂಖ್ಯೆಗಳನ್ನು ದಾಖಲಿಸಿ ಗ್ರಾಹಕರ ಸಹಿ ಪಡೆದಿದ್ದಳು ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯಲು ಗ್ರಾಹಕರಿಗೆ ಒಟಿಪಿ ಬರುತ್ತಿರಲಿಲ್ಲ, ಹೀಗಾಗಿ ತನ್ನ ತಂತ್ರವು ಬಯಲಾಗುವವರೆಗೂ ಸಾಕ್ಷಿ ನಿರಾತಂಕವಾಗಿ ವಂಚನೆಯನ್ನು ಮುಂದುವರಿಸಿದ್ದಳು.

ಫೆಬ್ರವರಿಯಲ್ಲಿ ಗ್ರಾಹಕನೋರ್ವ ತನ್ನ ಸ್ಥಿರ ಠೇವಣಿ ಖಾತೆಯಿಂದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿರದಿದ್ದರೆ ಸಾಕ್ಷಿಯ ವಂಚನೆ ಇನ್ನೂ ಮುಂದುವರಿಯುತ್ತಿತ್ತು.

ಈ ಬಗ್ಗೆ ವಿಚಾರಣೆಯನ್ನು ನಡೆಸಿದ ಬ್ಯಾಂಕ್ ಮ್ಯಾನೇಜರ್ ಫೆ.18ರಂದು ಪೋಲಿಸ್ ದೂರು ಸಲ್ಲಿಸಿದಾಗ ಸಾಕ್ಷಿಯ ಅದೃಷ್ಟ ಕೊನೆಗೊಂಡಿತ್ತು. 41 ಬ್ಯಾಂಕ್ ಖಾತೆಗಳಿಂದ ಹಣವನ್ನು ಹಿಂದೆಗೆದುಕೊಂಡಿದ್ದನ್ನು ಬಯಲಿಗೆಳೆದಿದ್ದ ವಿಚಾರಣಾ ವರದಿಯನ್ನು ದೂರಿನೊಂದಿಗೆ ಲಗತ್ತಿಸಲಾಗಿತ್ತು. ಪೋಲಿಸರು ಮೇ 31ರಂದು ಸಾಕ್ಷಿಯನ್ನು ಬಂಧಿಸಿದ್ದಾರೆ.

2020 ಮತ್ತು 2023ರ ನಡುವೆ ಸಾಕ್ಷಿ ತನ್ನ ನಂಬಿಕೆಯ ಹುದ್ದೆಯನ್ನು ವಂಚನೆಯ ಸಾಧನವನ್ನಾಗಿಸಿಕೊಂಡು ಸ್ಥಿರ ಠೇವಣಿ ಯೊಜನೆಯಡಿ 110 ಖಾತೆಗಳಿಂದ 4.58 ಕೋ.ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾಳೆಂದು ಆರೋಪಿಸಲಾಗಿದೆ.

ಸಾಕ್ಷಿ ಬ್ಯಾಂಕ್ ಖಾತೆಗಳಿಂದ ಎಗರಿಸಿದ್ದ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಬಳಸಿದ್ದಳು. ಪದೇ ಪದೇ ಭಾರೀ ನಷ್ಟ ಸಂಭವಿಸಿದ್ದರೂ ಆಕೆ ಅದನ್ನು ನಿಲ್ಲಿಸಿರಲಿಲ್ಲ.

ಬೇಗ ಶ್ರೀಮಂತಳಾಗಬೇಕು ಎಂದು ಬಯಸಿದ್ದ ಸಾಕ್ಷಿ ಶೇರು ವ್ಯವಹಾರದ ಗೀಳಿನಿಂದಾಗಿ ಗ್ರಾಹಕರ ಖಾತೆಗಳಿಂದ ಹಣವನ್ನು ಎಗರಿಸಿದ್ದಳು. ಆದರೆ ಭಾರೀ ನಷ್ಟವನ್ನು ಅನುಭವಿಸುತ್ತಿದ್ದರಿಂದ ಆಕೆಯ ಜೂಜಾಟ ವಿಫಲಗೊಂಡಿತ್ತು. ಸ್ಥಿರ ಠೇವಣಿ ಖಾತೆಗಳಿಗೆ ಹಣವನ್ನು ಮರಳಿಸುವ ಮೂಲಯೋಜನೆ ಹಳಿತಪ್ಪಿತ್ತು. ಹಣಕಾಸು ಮತ್ತು ಬ್ಯಾಂಕಿಂಗ್ ಬಗ್ಗೆ ಇದ್ದ ಜ್ಞಾನ ಸಾಕ್ಷಿಗೆ ನೆರವಾಗಿತ್ತು. ಜನರು ದೀರ್ಘಾವಧಿಗಾಗಿ ಸ್ಥಿರ ಠೇವಣಿಯಲ್ಲಿ ಹಣ ಹೂಡುವುದರಿಂದ ತನಗೆ ಹೆಚ್ಚಿನ ಅಪಾಯವಿಲ್ಲ ಎಂದು ಭಾವಿಸಿದ್ದ ಆಕೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡುತ್ತಲೇ ಇದ್ದಳು ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.

ಸಾಕ್ಷಿ ಈ ಹಿಂದೆಯೂ ತನ್ನ ತಂದೆ ಮತ್ತು ಸಂಬಂಧಿಕರಿಂದ 90 ಲ.ರೂ.ಗಳನ್ನು ಪಡೆದುಕೊಂಡು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಎಲ್ಲವನ್ನೂ ಕಳೆದುಕೊಂಡಿದ್ದಳು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News