×
Ad

ರಾಜಸ್ಥಾನ | ಪೆಟ್ರೋಲ್ ಪಂಪ್ ಸಿಬ್ಬಂದಿ ಮೇಲೆ ಹಲ್ಲೆ : ಎಸ್‌ಡಿಎಂ ವಿರುದ್ಧ ಆಕ್ರೋಶ

Update: 2025-10-24 23:24 IST

Photo|indiatoday

ರಾಜಸ್ಥಾನ : ಭಿಲ್ವಾರಾದಲ್ಲಿ ಪೆಟ್ರೋಲ್ ಪಂಪ್ ಸಿಬ್ಬಂದಿ ಮೇಲೆ ಎಸ್‌ಡಿಎಂ ಛೋಟು ಲಾಲ್ ಶರ್ಮಾ ಹಲ್ಲೆ ನಡೆಸಿದ್ದು, ಅವರ ವರ್ತನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಅಜ್ಮೀರ್-ಭಿಲ್ವಾರಾ ಹೆದ್ದಾರಿಯಲ್ಲಿರುವ ಜಸ್ವಂತಪುರ ಸಿಎನ್‌ಜಿ ಪೆಟ್ರೋಲ್ ಪಂಪ್‌ನಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. 

ಎಸ್‌ಡಿಎಂ ಛೋಟು ಲಾಲ್ ಶರ್ಮಾ ತಮ್ಮ ಕುಟುಂಬಸ್ಥರೊಂದಿಗೆ ಕಾರಿನಲ್ಲಿ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಪಂಪ್ ಬಂದಿದ್ದರು. ಸಿಎನ್‌ಜಿ ತುಂಬಿಸುವಾಗ ವಾಹನದಿಂದ ಹೊರಬರಲು ಸಿಬ್ಬಂದಿ ಸಲಹೆ ನೀಡಿದ್ದಾರೆ ಮತ್ತು ಹಿಂದಿದ್ದ ಮತ್ತೊಂದು ವಾಹನಕ್ಕೆ ಇಂಧನ ತುಂಬಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಈ ವೇಳೆ ಆಕ್ರೋಶಗೊಂಡ ಎಸ್‌ಡಿಎಂ ಶರ್ಮಾ ಮತ್ತು ಅವರ ಕುಟುಂಬಸ್ಥರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ನಮ್ಮ ವಾಹನಕ್ಕೆ ಮೊದಲು ಇಂಧನ ತುಂಬಿಸದೆ ಇನ್ನೊಬ್ಬರ ವಾಹನಕ್ಕೆ ಏಕೆ ತುಂಬಿಸುತ್ತಿದ್ದೀರಿ ಎಂದು ಪ್ರಶ್ನಿಸಿ ಎಸ್‌ಡಿಎಂ ಛೋಟು ಲಾಲ್ ಶರ್ಮಾ ಸಿಬ್ಬಂದಿಯನ್ನು ತಳ್ಳಿದರು. ವಾಗ್ವಾದ ತೀವ್ರಗೊಂಡು ಎಸ್‌ಡಿಎಂ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದರು.

ಇದಕ್ಕೆ ಪ್ರತಿಯಾಗಿ, ಪೆಟ್ರೋಲ್ ಪಂಪ್ ಸಿಬ್ಬಂದಿಯೂ ಎಸ್‌ಡಿಎಂಗೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಾನು ಇಲ್ಲಿನ ಎಸ್‌ಡಿಎಂ, ನನ್ನ ಮೇಲೆ ಕೈ ಎತ್ತುವವರು ಯಾರು ಎಂದು ಛೋಟು ಲಾಲ್ ಶರ್ಮಾ ಪದೇ ಪದೇ ಆತ ಹೇಳುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. 

ಘಟನೆ ಬಗ್ಗೆ ಮಾಹಿತಿ ವೈರಲ್ ಆಗುತ್ತಿದ್ದಂತೆ ಎಸ್‌ಡಿಎಂ ಛೋಟು ಲಾಲ್ ಶರ್ಮಾ ಅವರ ಎರಡನೇ ಪತ್ನಿ ದೀಪಿಕಾ ವ್ಯಾಸ್ ಪೆಟ್ರೋಲ್ ಪಂಪ್ ಸಿಬ್ಬಂದಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪೆಟ್ರೋಲ್ ಪಂಪ್ ಸಿಬ್ಬಂದಿ ತನಗೆ ಕಿರುಕುಳ ನೀಡಿದ್ದರಿಂದ ಪತಿಗೆ ಕೋಪ ಬಂದು ಸಿಬ್ಬಂದಿಯನ್ನು ಗದರಿದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಮತ್ತೊಂದೆಡೆ, ಎಸ್‌ಡಿಎಂ ಛೋಟು ಲಾಲ್ ಶರ್ಮಾ ಕೂಡ, ಪೆಟ್ರೋಲ್ ಪಂಪ್‌ನಲ್ಲಿ ಸಿಬ್ಬಂದಿ ತಮ್ಮ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ತಮ್ಮ ವಾಹನಕ್ಕೆ ಇಂಧನ ತುಂಬಿಸದೆ ಮತ್ತೊಂದು ವಾಹನಕ್ಕೆ ಹೋಗಿ ತುಂಬಿಸಿದರು. ಇದನ್ನು ವಿರೋಧಿಸಿದಾಗ ಹಲ್ಲೆ ನಡೆಯಿತು. ವೈರಲ್ ಆಗಿರುವ ವಿಡಿಯೋ ಸಂಪೂರ್ಣವಾಗಿ ಎಡಿಟ್ ಮಾಡಲಾಗಿದೆ ಮತ್ತು ತಮ್ಮ ವಿರುದ್ಧ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ವೀಡಿಯೊ ವೈರಲ್‌ ಬೆನ್ನಲ್ಲೆ ರಾಜಸ್ಥಾನ ಸರಕಾರ ಛೋಟು ಲಾಲ್ ಶರ್ಮಾನನ್ನು ಅಮಾನತುಗೊಳಿಸಿದೆ. ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಛೋಟು ಲಾಲ್ ಶರ್ಮಾ ಅಮಾನತುಗೊಂಡಿರುವುದು ಇದೇ ಮೊದಲೇನಲ್ಲ. ಅವರು ಈ ಹಿಂದೆ ಮೂರು ಬಾರಿ "ಅವೇಟಿಂಗ್ ಪೋಸ್ಟಿಂಗ್ ಆರ್ಡರ್" (APO) ಅಡಿಯಲ್ಲಿ ಅಮಾನತುಗೊಂಡಿದ್ದಾರೆ.

2017ರಲ್ಲಿ ಭಿಲ್ವಾರಾ ಜಿಲ್ಲೆಯ ಮಾಂಡಲ್ ಉಪವಿಭಾಗದ ಎಸ್‌ಡಿಎಂ ಆಗಿದ್ದಾಗ,  ಶಿಬಿರವೊಂದರಲ್ಲಿ ಪಂಚಾಯತ್ ಸಮಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಸಾರ್ವಜನಿಕವಾಗಿ ಜಗಳವಾಡಿದ್ದಕ್ಕಾಗಿ ಅವರನ್ನು APO ಮಾಡಲಾಗಿತ್ತು.

ಅದೇ ವರ್ಷ ಗಣಿಗಾರಿಕೆ ಪ್ರಕರಣವೊಂದರಲ್ಲಿಯೂ ಅವರನ್ನು APO ಮಾಡಲಾಗಿತ್ತು. 2018ರಲ್ಲಿ ಟೋಂಕ್‌ನಲ್ಲಿ ಉಪವಿಭಾಗಾಧಿಕಾರಿಯಾಗಿದ್ದಾಗ ಹಣಕ್ಕೆ ಸಂಬಂಧಿಸಿದ ಜಗಳದಲ್ಲಿ ಮನೆ ಕೆಲಸಗಾರನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಅವರನ್ನು "ಅವೇಟಿಂಗ್ ಪೋಸ್ಟಿಂಗ್ ಆರ್ಡರ್" ಮಾಡಲಾಗಿತ್ತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News