×
Ad

ದೃಷ್ಟಿ IAS ಸಂಸ್ಥೆಯ ಸ್ಥಾಪಕ, ಖ್ಯಾತ ಶಿಕ್ಷಕ ಡಾ. ವಿಕಾಸ್ ದಿವ್ಯಕೀರ್ತಿ ವಿರುದ್ಧ ನ್ಯಾಯಾಲಯ ಏಕೆ ಕ್ರಮ ಕೈಗೊಂಡಿದೆ?

Update: 2025-07-12 13:28 IST

ಡಾ. ವಿಕಾಸ್ ದಿವ್ಯಕೀರ್ತಿ (Photo credit: livelaw.in)

ಹೊಸದಿಲ್ಲಿ: ದೃಷ್ಟಿ IAS ಕೋಚಿಂಗ್ ಸಂಸ್ಥೆಯ ಸ್ಥಾಪಕ ಮತ್ತು ಪ್ರಸಿದ್ಧ ಶಿಕ್ಷಕ ಡಾ. ವಿಕಾಸ್ ದಿವ್ಯಕೀರ್ತಿ ಅವರು ಯೂಟ್ಯೂಬ್ ವಿಡಿಯೋವೊಂದರಲ್ಲಿ ನ್ಯಾಯಾಂಗದ ಕುರಿತು ಅವಹೇಳನಕಾರಿ ಮತ್ತು ವಿಡಂಬನಾತ್ಮಕ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಅಜ್ಮೀರ್ ನ್ಯಾಯಾಲಯವು ಅವರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಭಾಗಶಃ ಮಾನ್ಯತೆ ನೀಡಿದೆ.

“IAS vs Judge: ಯಾರು ಹೆಚ್ಚು ಶಕ್ತಿಶಾಲಿ” ಎಂಬ ಶೀರ್ಷಿಕೆಯ ವಿಡಿಯೋವನ್ನು ಉಲ್ಲೇಖಿಸಿ ನೀಡಿರುವ ದೂರಿನಲ್ಲಿ, ದಿವ್ಯಕೀರ್ತಿ ಅವರು ಕೇವಲ ಪ್ರಚಾರಕ್ಕಾಗಿ ನ್ಯಾಯಾಂಗವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನ್ಯಾಯಾಲಯವು ಈ ಪ್ರಕರಣವನ್ನು ಕ್ರಿಮಿನಲ್ ರಿಜಿಸ್ಟರ್‌ನಲ್ಲಿ ದಾಖಲಿಸುವಂತೆ ನಿರ್ದೇಶಿಸಿದ್ದು, ದಿವ್ಯಕೀರ್ತಿ ಅವರನ್ನು ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಅಡ್ವೊಕೇಟ್ ಕಮಲೇಶ್ ಮಾಂಡ್ಲಿಯಾ ಅವರು ಈ ದೂರು ನೀಡಿದ್ದಾರೆ. ದಿವ್ಯಕೀರ್ತಿ ಅವರ ವಿಡಿಯೋದಲ್ಲಿನ ಹೇಳಿಕೆಗಳು IAS ಅಧಿಕಾರಿಗಳು ಮತ್ತು ನ್ಯಾಯಾಧೀಶರನ್ನು ಅವಹೇಳನಕಾರಿ ರೀತಿಯಲ್ಲಿ ಹೋಲಿಕೆ ಮಾಡಿವೆ. ನ್ಯಾಯಾಂಗ ಹಾಗೂ ನ್ಯಾಯಾಂಗ ಅಧಿಕಾರಿಗಳನ್ನು ಅಗೌರವದಿಂದ ನಡೆಸಿಕೊಂಡಿವೆ ಎಂದು ಮಾಂಡ್ಲಿಯಾ ಆರೋಪಿಸಿದ್ದಾರೆ.

ವಿಡಿಯೋದಲ್ಲಿನ ವಿಷಯವು ಕಾನೂನು ವೃತ್ತಿಪರರ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಹಾಳುಮಾಡಿದೆ ಎಂದು ದೂರುದಾರರು ಹೇಳಿದ್ದಾರೆ.

ಈ ವಿಡಿಯೋ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) (ಸಾರ್ವಜನಿಕ ದುಷ್ಕೃತ್ಯ), 356(2), (3) (ಮಾನನಷ್ಟ) 2023 ಮತ್ತು IT ಕಾಯಿದೆಯ ಸೆಕ್ಷನ್ 66A(b) ಅಡಿಯಲ್ಲಿ ಬರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದಿವ್ಯಕೀರ್ತಿ ಅವರು ನ್ಯಾಯಾಂಗದ ನೇಮಕಾತಿ ಮತ್ತು ಕೊಲಿಜಿಯಂ ವ್ಯವಸ್ಥೆಗೆ ಸಂಬಂಧಿಸಿದಂತೆ "ಜುಗಾಡ್" ಅಂದ್ರೆ (ಹೊಂದಾಣಿಕೆಯ ವ್ಯವಸ್ಥೆಗಳು) ಬಗ್ಗೆ ಮಾತನಾಡಿದ್ದಾರೆ ಎಂದು ಅಡ್ವೊಕೇಟ್ ಕಮಲೇಶ್ ಮಾಂಡ್ಲಿಯಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಿಡಿಯೋದಲ್ಲಿ, ದಿವ್ಯಕೀರ್ತಿ ಅವರು ಜಿಲ್ಲಾ ನ್ಯಾಯಾಧೀಶರು "ದೊಡ್ಡ ವಿಷಯವಲ್ಲ" ಮತ್ತು ಹೈಕೋರ್ಟ್ ನ್ಯಾಯಾಧೀಶರಾಗಲು "ಲಾಬಿ ಮಾಡಬೇಕು, ಸಿಹಿ ಹಂಚಬೇಕು" ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ನ್ಯಾಯಾಂಗದ ಅಧಿಕಾರವು ಪೊಲೀಸ್ ಸಹಕಾರವನ್ನು ಅವಲಂಬಿಸಿದೆ ಎಂದು ಸೂಚಿಸುವ ಮೂಲಕ ಜಿಲ್ಲಾ ನ್ಯಾಯಾಧೀಶರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳ ಅಧಿಕಾರಗಳ ನಡುವೆ ವಿವಾದಾತ್ಮಕ ಹೋಲಿಕೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಗಳು ನ್ಯಾಯಾಂಗದ ಘನತೆಗೆ ಧಕ್ಕೆ ತರುತ್ತವೆ ಎಂದು ಮಾಂಡ್ಲಿಯಾ ಅವರ ಕಾನೂನು ತಂಡವು ವಾದಿಸಿದೆ. ಇನ್ನು ಜಿಲ್ಲಾ ನ್ಯಾಯಾಧೀಶರು ಅಂದ್ರೆ ಕುರಿತಾಗಿ ಮಾತನಾಡುವಾಗ "ಡಿಜೆ ವಾಲೆ ಬಾಬು" ಎಂಬ ಹಾಡಿನ ಸಾಲುಗಳನ್ನು ವ್ಯಂಗ್ಯವಾಗಿ ಬಳಸಲಾಗಿದೆ ಎಂಬ ಆರೋಪವೂ ಇದೆ.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮನಮೋಹನ್ ಚಂದೇಲ್ ಅವರು ಜುಲೈ 8 ರ ತಮ್ಮ ಆದೇಶದಲ್ಲಿ, ವಿಕಾಸ್ ದಿವ್ಯಕೀರ್ತಿ ಅವರು "ಸಣ್ಣ ಪ್ರಚಾರ ಗಳಿಸುವ ದುರುದ್ದೇಶದಿಂದ ನ್ಯಾಯಾಂಗದ ವಿರುದ್ಧ ಅವಹೇಳನಕಾರಿ, ನಿಂದನೀಯ ಮತ್ತು ವಿಡಂಬನಾತ್ಮಕ ಭಾಷೆಯನ್ನು ಬಳಸಿದ್ದಾರೆ" ಎಂದು ಹೇಳಿದ್ದಾರೆ.

ಇದು ನ್ಯಾಯಾಧೀಶರು ಮಾತ್ರವಲ್ಲದೆ ನ್ಯಾಯಾಲಯದ ಅಧಿಕಾರಿಗಳಾದ ವಕೀಲರನ್ನು ಸಹ ಒಳಗೊಂಡಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ವಿಡಿಯೋವನ್ನು ಜನರಿಗೆ ಆಕರ್ಷಕಗೊಳಿಸುವ ದುರುದ್ದೇಶದಿಂದ ಇಂತಹ ಪದಗಳನ್ನು ಮತ್ತು ವಾಕ್ಯಗಳನ್ನು ಬಳಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇದರಿಂದ "ನ್ಯಾಯಾಂಗವನ್ನು ಅಪಹಾಸ್ಯ ಮಾಡಲಾಗಿದೆ, ಇದರಿಂದ ನ್ಯಾಯಾಂಗದೊಂದಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯ ಘನತೆ, ನಿಷ್ಪಕ್ಷ ನೀತಿ ಮತ್ತು ಖ್ಯಾತಿಗೆ ಹಾನಿಯಾಗಿದೆ ಮತ್ತು ನ್ಯಾಯಾಂಗದ ಚಿತ್ರಣ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ" ಎಂದು ನ್ಯಾಯಾಲಯ ಹೇಳಿದೆ.

ವಿಡಿಯೋ ಅಪ್‌ಲೋಡ್ ಮಾಡಿರುವ ಯೂಟ್ಯೂಬ್ ಚಾನೆಲ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ದಿವ್ಯಕೀರ್ತಿ ಅವರು, ವಾದಿಸಿದ್ದಾರೆ. ವಿಡಿಯೋವನ್ನು ತಮ್ಮ ಒಪ್ಪಿಗೆ ಇಲ್ಲದೆ ಮೂರನೇ ವ್ಯಕ್ತಿ ಸಂಪಾದಿಸಿ ಪ್ರಕಟಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ದೂರುದಾರರು ಸೆಕ್ಷನ್ 356 BNS ಅಡಿಯಲ್ಲಿ "ಬಾಧಿತ ವ್ಯಕ್ತಿ" ಆಗುವ ಸಾಧ್ಯತೆಯಲ್ಲಿ ಕೊರತೆ ಇದೆ ಎಂದು ಅವರು ವಾದಿಸಿದ್ದಾರೆ.

ವಿಡಿಯೋದಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಗುರುತಿಸಬಹುದಾದ ಗುಂಪುಗಳನ್ನು ಗುರಿಯಾಗಿಸಲಾಗಿಲ್ಲ ಮತ್ತು ಇದು ಸಾರ್ವಜನಿಕ ಆಡಳಿತದ ಬಗ್ಗೆ ಸಾಮಾನ್ಯ ವಿಮರ್ಶೆಯಾಗಿದೆ ಎಂದು ದಿವ್ಯಕೀರ್ತಿ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯವು ದಾಖಲೆಯಲ್ಲಿ ಲಭ್ಯವಿರುವ ಪುರಾವೆಗಳನ್ನು ಪರಿಶೀಲಿಸಿದ್ದು, ವಿಡಿಯೋದಲ್ಲಿ ಬಳಸಿದ ಭಾಷೆ ನ್ಯಾಯಾಂಗದ ಘನತೆಯನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ವಾಕ್ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಬೇಕು, ಆದರೆ ಈ ಹಕ್ಕಿಗೆ ಕೆಲವು ನಿರ್ಬಂಧಗಳಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಕ್ಕಿನ ನೆಪದಲ್ಲಿ ಯಾರೂ ನ್ಯಾಯಾಂಗ ಅಥವಾ ನ್ಯಾಯಾಧೀಶರನ್ನು ಅವಮಾನಿಸಲು, ಮಾನಹಾನಿ ಮಾಡಲು ಅಥವಾ ನಿಂದಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವಿವಾದಾತ್ಮಕ ವಿಡಿಯೋ ಕುರಿತು ದಿವ್ಯಕೀರ್ತಿ ಕ್ಷಮೆಯಾಚಿಸಬಹುದಿತ್ತು, ಆದರೆ ಅವರು ಹಾಗೆ ಮಾಡಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 22 ರಂದು ನಡೆಯಲಿದ್ದು, ದಿವ್ಯಕೀರ್ತಿ ಅವರು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News