ರಾಜಸ್ಥಾನ| ಬಿಷ್ಣೋಯಿ ಗ್ಯಾಂಗ್‌ನ ಶಾರ್ಪ್ ಶೂಟರ್ ಬಂಧನ
Photo:ndtv.in
ಜೈಪುರ,ಜ.18: ದಿಲ್ಲಿ ಕ್ರೈಂ ಬ್ರಾಂಚ್‌ನ ರೌಡಿ ನಿಗ್ರಹ ದಳವು (ಎಜಿಎಸ್) ಹಾಗೂ ರಾಜಸ್ಥಾನ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯೊಂದರಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆ ನಂಟು ಹೊಂದಿದ್ದಾನೆನ್ನಲಾದ ಶಾರ್ಪ್‌ಶೂಟರ್ ಒಬ್ಬನನ್ನು ಬಂಧಿಸಿದೆ.
ಉತ್ತರಪ್ರದೇಶದ ಆಗ್ರಾ ನಿವಾಸಿ ಪ್ರದೀಪ್ ಶರ್ಮಾ ಯಾನೆ ಗೋಲು (23) ಬಂಧಿತ ಆರೋಪಿ. 2026ರ ಜನವರಿ 16ರಂದು ಲಭ್ಯವಾದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದಲ್ಲಿ ಆತನನ್ನು ದಿಲ್ಲಿಯ ಉತ್ತಮ ನಗರದಿಂದ ಬಂಧಿಸಲಾಗಿದೆ. ವಿಚಾರಣೆಗೊಳಪಡಿಸಿದ ಬಳಿಕ ಆತನನ್ನು ರಾಜಸ್ಥಾನ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಶರ್ಮಾನ ವಿರುದ್ಧ ಗಂಗಾನಗರ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಪೊಲೀಸರಿಗೆ ಬೇಕಾಗಿದ್ದ. ಬಿಷ್ಣೋಯಿ ಗ್ಯಾಂಗ್ 2025ರ ಮಾರ್ಚ್‌ನಲ್ಲಿ ಉದ್ಯಮಿಯೊಬ್ಬರಿಗೆ 4 ಕೋಟಿ ರೂ. ಹಣವನ್ನು ನೀಡುವಂತೆ ಬೆದರಿಕೆ ಹಾಕಿತ್ತು. ಆದರೆ ಉದ್ಯಮಿ ಹಣ ನೀಡದೆ ಇದ್ದಾಗ, ಆತನ ನಿವಾಸದಲ್ಲಿ ಗುಂಡಿನ ದಾಳಿ ನಡೆಸುವ ಕೆಲಸಕ್ಕೆ ಪ್ರದೀಪ್ ಶರ್ಮಾನನ್ನು ಬಿಷ್ಣೋಯಿ ಗ್ಯಾಂಗ್ ನಿಯೋಜಿಸಿತ್ತು.
2025ರ ಮೇ ತಿಂಗಳಲ್ಲಿ ಶರ್ಮಾ ಹಾಗೂ ಆತನ ಸಹಚರರು ಈ ಉದ್ಯಮಿಯ ನಿವಾಸದ ಮೇಲೆ ಗುಂಡು ಹಾರಾಟ ನಡೆಸಿದ್ದು, ಆನಂತರ ಪ್ರಕರಣ ದಾಖಲಾಗಿತ್ತು. ಜಾಮೀನು ಬಿಡುಗಡೆಗೊಂಡ ಆನಂತರವೂ ಆತ ಗ್ಯಾಂಗ್ ಜೊತೆಗಿನ ನಂಟನ್ನು ಮುಂದುವರಿಸಿದ್ದು, ಅಕ್ರಮ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡನ್ನು ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ.