×
Ad

ಕಳ್ಳತನ ಮಾಡಲು ಮನೆಗೆ ನುಗ್ಗಿ ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್ ಶಾಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿ !; ವೀಡಿಯೊ ವೈರಲ್

Update: 2026-01-06 16:33 IST

Photo Credit : indiatoday.in

ಕೋಟಾ (ರಾಜಸ್ಥಾನ): ಕಳ್ಳತನ ಮಾಡಲು ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್‌ನ ಶಾಫ್ಟ್‌ನಲ್ಲಿ ಸಿಲುಕಿಕೊಂಡು ಸುಮಾರು ಒಂದು ಗಂಟೆ ಕಾಲ ಅಸಹಾಯಕ ಸ್ಥಿತಿಯಲ್ಲಿ ನೇತಾಡಿದ ಘಟನೆ ನಗರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜನವರಿ 3ರಂದು ಖತು ಶ್ಯಾಮ್‌ ಜಿಗೆ ಪ್ರಯಾಣಿಸಿದ್ದ ಸುಭಾಷ್ ಕುಮಾರ್ ರಾವತ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಮರುದಿನ ಬೆಳಗಿನ ಜಾವ ಸುಮಾರು 1 ಗಂಟೆ ವೇಳೆಗೆ ರಾವತ್ ಅವರ ಪತ್ನಿ ಮನೆಗೆ ಹಿಂದಿರುಗಿ ಮುಖ್ಯ ಬಾಗಿಲು ತೆರೆಯುತ್ತಿದ್ದಂತೆಯೇ, ಹೊರಗೆ ನಿಲ್ಲಿಸಿದ್ದ ಸ್ಕೂಟರ್‌ನ ಹೆಡ್‌ಲೈಟ್‌ಗಳ ಬೆಳಕು ಅಡುಗೆಮನೆಗೆ ಬಿದ್ದಿದೆ. ಈ ವೇಳೆ ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್‌ನ ಶಾಫ್ಟ್‌ನಲ್ಲಿ ಕಳ್ಳನೊಬ್ಬ ಅರ್ಧ ದೇಹ ಮನೆಯೊಳಗೆ ಹಾಗೂ ಉಳಿದ ಭಾಗ ಹೊರಗಡೆ ಇರುವಂತೆ ಸಿಲುಕಿಕೊಂಡಿದ್ದ ದೃಶ್ಯ ಕಾಣಿಸಿಕೊಂಡಿದೆ.

ಪೊಲೀಸರ ಪ್ರಕಾರ, ಆರೋಪಿ ಕಳ್ಳತನಕ್ಕೆ ಮನೆಯ ಆವರಣವನ್ನು ಪ್ರವೇಶಿಸಿದ್ದಾನೆ. ಆದರೆ ಎಕ್ಸಾಸ್ಟ್ ಫ್ಯಾನ್ ಶಾಫ್ಟ್ ಮೂಲಕ ಒಳನುಗ್ಗಲು ಯತ್ನಿಸಿದ ವೇಳೆ ಆತ ಸಿಲುಕಿಕೊಂಡಿದ್ದು, ತನ್ನನ್ನು ತಾನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಶಬ್ದ ಕೇಳಿದ ಅವನ ಸಹಚರನೊಬ್ಬ ಸ್ಥಳದಿಂದ ಪರಾರಿಯಾಗಿದ್ದು, ಸಿಲುಕಿದ್ದ ವ್ಯಕ್ತಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ.

ಸ್ಥಳೀಯರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ನಡುವೆಯೇ ಸುಮಾರು ಒಂದು ಗಂಟೆ ಕಾಲ ಹೈವೋಲ್ಟೇಜ್ ನಾಟಕ ನಡೆಯಿತು. ಅನುಮಾನ ಹುಟ್ಟದಂತೆ ನೋಡಿಕೊಳ್ಳಲು ಆರೋಪಿ ಪೊಲೀಸ್ ಸ್ಟಿಕ್ಕರ್ ಅಂಟಿಸಿದ್ದ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಎಕ್ಸಾಸ್ಟ್ ಫ್ಯಾನ್ ಶಾಫ್ಟ್‌ನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಸಹಚರನ ಪತ್ತೆಗಾಗಿ ಹಾಗೂ ಈ ಆರೋಪಿ ಈ ಪ್ರದೇಶದಲ್ಲಿನ ಇತರ ಕಳ್ಳತನ ಪ್ರಕರಣಗಳೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News