×
Ad

ಎಎಪಿ ತೊರೆದು ಬಿಜೆಪಿ ಸೇರ್ಪಡೆ ವೇಳೆ ಭಾವುಕರಾದ ಮಾಜಿ ಶಾಸಕ ರಾಜೇಶ್ ಗುಪ್ತಾ

Update: 2025-11-29 22:19 IST

Photo Credit : PTI 

ಹೊಸದಿಲ್ಲಿ: ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ) ಉಪಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವ ವೇಳೆ, ಆಮ್ ಆದ್ಮಿ ಪಕ್ಷ (ಎಎಪಿ)ಗೆ ಹಿನ್ನಡೆಯಾಗಿದ್ದು, ಹಿರಿಯ ನಾಯಕ ಹಾಗೂ ಎರಡು ಬಾರಿ ಶಾಸಕರಾಗಿದ್ದ ರಾಜೇಶ್ ಗುಪ್ತಾ ಶನಿವಾರ ಪಕ್ಷ ತೊರೆದು ಬಿಜೆಪಿ ಸೇರಿದರು.

ಎಎಪಿಯ ಮಾಜಿ ರಾಷ್ಟ್ರೀಯ ವಕ್ತಾರ ಹಾಗೂ ಕರ್ನಾಟಕ ಉಸ್ತುವಾರಿಯಾಗಿದ್ದ ಗುಪ್ತಾ ಅವರನ್ನು ದಿಲ್ಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಬಿಜೆಪಿ ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಂಡಿತು.

ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಜೊತೆಗಿನ ತಮ್ಮ ಅನುಭವಗಳನ್ನು ನೆನಪಿಸಿಕೊಂಡು ಮಾತನಾಡುವಾಗ ಗುಪ್ತಾ ಭಾವುಕರಾಗಿ ಕಣ್ಣೀರು ಹಾಕಿದರು. “ಎಎಪಿ ಸ್ಥಾಪನೆಯಾಗುವಾಗ ದೇಶದ ಗಣ್ಯರು ಕೇಜ್ರಿವಾಲ್ ಜತೆ ನಿಂತರು, ಆದರೆ ಅವರು ಎಲ್ಲರಿಗೂ ದ್ರೋಹ ಮಾಡಿದರು. ಇಂದು ನಾನೂ ಆ ಪಟ್ಟಿಗೆ ಸೇರಿದ್ದೇನೆ,” ಎಂದು ಅವರು ವಿಷಾದಿಸಿದರು.

“ಅಣ್ಣಾ ಹಜಾರೆ ಆಂದೋಲನದ ವೇಳೆ ಉದ್ಯೋಗ ಬಿಟ್ಟು ಹೋರಾಟಕ್ಕೆ ಬಂದ ಜನರ ಬಗ್ಗೆ ಈಗ ಎಎಪಿ ಕಾಳಜಿ ವಹಿಸುವುದೇ ಇಲ್ಲ,” ಎಂದು ಗುಪ್ತಾ ಇದೇ ವೇಳೆ ಆರೋಪಿಸಿದರು.

“ಎಎಪಿಯಿಂದ ಅನೇಕರು ನಿರಾಶರಾಗಿದ್ದಾರೆ. ಕಾರ್ಯಕರ್ತರನ್ನು ಬಳಸಿ ಎಸೆಯುವ ಸಂಸ್ಕೃತಿ ಅಲ್ಲಿ ರೂಢಿಯಾಗಿದೆ. ಅದೇ ಪಕ್ಷದ ಪತನಕ್ಕೆ ಕಾರಣ,” ಎಂದು ಗುಪ್ತಾ ಆರೋಪಿಸಿದರು. ತಮ್ಮ ಕಾರ್ಯ ಅವಧಿಯಲ್ಲಿ ಪಕ್ಷದ ಸಂಚಾಲಕರು ತಮ್ಮ ಭೇಟಿ ಗೆ ಅವಕಾಶ ನೀಡಲು ತಯಾರಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಶೋಕ್ ವಿಹಾರ್ ಎಂಸಿಡಿ ಕ್ಷೇತ್ರದಲ್ಲಿ ಎಎಪಿ ಉಪಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ, ತಮ್ಮ ಅಸಮಾಧಾನವನ್ನು ಹೊರಹಾಕಿದ ಗುಪ್ತಾ ಅವರಿಗೆ ಪಕ್ಷದಿಂದಲೇ ನೋಟಿಸ್ ನೀಡಲಾಯಿತು. ತಮ್ಮ ಪತ್ನಿಗೆ ಕೌನ್ಸಿಲರ್ ಟಿಕೆಟ್ ನಿರಾಕರಿಸಿರುವುದು ಈ ಬಿಕ್ಕಟ್ಟಿಗೆ ಕಾರಣ ಎಂಬ ಆರೋಪ ಕೂಡ ಕೇಳಿಬಂದಿದೆ.

ಗುಪ್ತಾ ಅವರ ನಿರ್ಗಮನದ ಬಗ್ಗೆ ಮಾತನಾಡಿದ ದಿಲ್ಲಿ ಎಎಪಿ ಅಧ್ಯಕ್ಷ ಸೌರಭ್ ಭಾರದ್ವಾಜ್, “ರಾಜೇಶ್ ಗುಪ್ತಾ ನಮ್ಮ ಸಹೋದರರು. ಪಕ್ಷವು ಅವರನ್ನು ನಾಲ್ಕು ಬಾರಿ ಶಾಸಕ ಚುನಾವಣೆಗೆ ಕಣಕ್ಕಿಳಿಸಿತು. ಆದರೆ ಅವರು ಗೆಲ್ಲಲಿಲ್ಲ. ಉಪಚುನಾವಣೆಯಲ್ಲಿ ತಮ್ಮ ಪತ್ನಿಗೆ ಟಿಕೆಟ್ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದರು. ಪಕ್ಷದ ನಿಯಮಾನುಸಾರ ಅದು ಸಾಧ್ಯವಾಗಲಿಲ್ಲ,” ಎಂದು ಹೇಳಿದರು.

“ಅವರು ಬೇರೆ ಪಕ್ಷದೊಂದಿಗೆ ಆಂತರಿಕ ವಿಚಾರಗಳನ್ನು ಹಂಚಿಕೊಂಡರು. ನಂತರ ಕೋಪದಲ್ಲಿ ಎಎಪಿ ತೊರೆದು ಬಿಜೆಪಿ ಸೇರಿದರು. ಅವರಿಗೆ ನಮ್ಮ ಶುಭಾಶಯಗಳು,” ಎಂದ ಭಾರದ್ವಾಜ್ ANIಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News