ಮಾಜಿ ಯೋಧರು, ಅವರ ಅವಲಂಬಿತರ ಹಣಕಾಸು ನೆರವು ಶೇ.100ಕ್ಕೆ ಏರಿಕೆ : ರಾಜನಾಥ್ ಸಿಂಗ್ ಅಸ್ತು
ರಾಜನಾಥ್ ಸಿಂಗ್ | Photo Credi : PTI
ಹೊಸದಿಲ್ಲಿ, ಅ. 15: ಕೇಂದ್ರೀಯ ಸೈನಿಕ ಮಂಡಳಿಯ ಮೂಲಕ ಮಾಜಿ ಸೈನಿಕರ ಕಲ್ಯಾಣ ಇಲಾಖೆ ಜಾರಿಗೆ ತಂದಿರುವ ಯೋಜನೆಗಳ ಅಡಿಯಲ್ಲಿ ಮಾಜಿ ಯೋಧರು (ಇಎಕ್ಸ್‌ಎಂ) ಹಾಗೂ ಅವರ ಅವಲಂಬಿತರ ಹಣಕಾಸು ನೆರವನ್ನು ಶೇ.100ಕ್ಕೆ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಅನುಮೋದನೆ ನೀಡಿದ್ದಾರೆ.
ಈ ಪರಿಷ್ಕೃತ ದರಗಳು 2025 ನವೆಂಬರ್ 1ರಿಂದ ಸಲ್ಲಿಕೆಯಾಗುವ ಅರ್ಜಿಗಳಿಗೆ ಅನ್ವಯವಾಗುತ್ತದೆ. ಇದರಿಂದ ಶಸಸ್ತ್ರ ಪಡೆಗಳ ಫ್ಲ್ಯಾಗ್ ಡೇ ಫಂಡ್ (ಎಎಫ್‌ಎಫ್‌ಡಿಎಫ್)ಗೆ ವಾರ್ಷಿಕ ಸರಿ ಸುಮಾರು 257 ಕೋ.ರೂ.ಹೊರೆ ಬೀಳಲಿದೆ.
ಈ ನಿರ್ಧಾರ ಪಿಂಚಣಿದಾರರಲ್ಲದ ಮಾಜಿ ಯೋಧರು, ವಿಧವೆಯರು ಹಾಗೂ ಕಡಿಮೆ ಆದಾಯದ ಗುಂಪುಗಳ ಅವಲಂಬಿತರಿಗೆ ಸಾಮಾಜಿಕ ಭದ್ರತೆಯನ್ನು ಬಲಪಡಿಸುತ್ತದೆ. ಇದು ಯೋಧರ ಸೇವೆ ಹಾಗೂ ತ್ಯಾಗವನ್ನು ಗೌರವಿಸುವ ಸರಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಪೆನರಿ ಅನುದಾನವನ್ನು ಪ್ರತಿ ಫಲಾನುಭವಿಗಳಿಗೆ ತಿಂಗಳಿಗೆ 4 ಸಾವಿರ ರೂ.ನಿಂದ 8 ಸಾವಿರ ರೂ.ಗೆ ದ್ವಿಗುಣಗೊಳಿಸಲಾಗಿದೆ. ಇದು ನಿಯಮಿತ ಆದಾಯವಿಲ್ಲದ ವೃದ್ಧರು, ಪಿಂಚಣಿ ಪಡೆಯದ ಮಾಜಿ ಯೋಧರು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟ ವಿಧವೆಯರಿಗೆ ನಿರಂತರ ಜೀವಿತಾವಧಿಯ ಬೆಂಬಲವನ್ನು ಒದಗಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಶಿಕ್ಷಣ ಅನುದಾನವನ್ನು ತಿಂಗಳಿಗೆ 1 ಸಾವಿರ ರೂ.ನಿಂದ 2 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ. ಇದು ಇಬ್ಬರು ಅವಲಂಬಿತ ಮಕ್ಕಳಿಗೆ (1ನೇ ತರಗತಿಯಿಂದ ಪದವಿ ವರೆಗೆ) ಅಥವಾ 2 ವರ್ಷಗಳ ಕೋರ್ಸ್‌ಗಳನ್ನು ಪಡೆಯುತ್ತಿರುವ ವಿಧವೆಯರಿಗೆ ದೊರೆಯಲಿದೆ.
ವಿವಾಹದ ಅನುದಾನವನ್ನು 50 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಈ ಆದೇಶ ಹೊರಡಿಸಿದ ನಂತರ ನಡೆಯುವ ನಿವೃತ್ತ ಯೋಧರ ಇಬ್ಬರು ಹೆಣ್ಣು ಮಕ್ಕಳಿಗೆ, ವಿಧವೆಯರ ಮರು ವಿವಾಹಕ್ಕೆ ಇದು ಅನ್ವಯಿಸುತ್ತದೆ ಎಂದು ಹೇಳಿದೆ.