ಕಮಲ್ ಹಾಸನ್, ಇತರ ಐವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಕಮಲ್ ಹಾಸನ್ | PC : PTI
ಚೆನ್ನೈ: ಗುರುವಾರ ತಮಿಳುನಾಡಿನಿಂದ ರಾಜ್ಯಸಭೆಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ‘ಥಗ್ ಲೈಫ್’ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಹಾಗೂ ಕವಯಿತ್ರಿ ಸಲ್ಮಾ ಮತ್ತು ರಾಜ್ಯಪಾಲ ಆರ್.ಎನ್.ರವಿ ವಿರುದ್ಧ ಡಿಎಂಕೆಯ ಕಾನೂನು ಸಮರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಿ.ವಿಲ್ಸನ್ ಸೇರಿದಂತೆ ಇತರ ಐವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆರು ಸ್ಥಾನಗಳಿಗೆ ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪರಿಶೀಲನೆಯ ಬಳಿಕ ಈ ಪೈಕಿ ಡಿಎಂಕೆಯ ಮೂರು, ಎಂಎನ್‌ಎಂನ ಒಂದು ಮತ್ತು ಎಐಎಡಿಎಂಕೆಯ ಎರಡು ಸೇರಿದಂತೆ ಆರು ನಾಮಪತ್ರಗಳು ಸ್ವೀಕೃತಗೊಂಡಿವೆ. ಜುಲೈ 24, 2025ರಂದು ಆರು ಸದಸ್ಯರ ನಿವೃತ್ತಿಯಿಂದ ತೆರವಾಗಲಿರುವ ರಾಜ್ಯಸಭೆಯ ಸ್ಥಾನಗಳಿಗೆ ಈ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಮಿಳುನಾಡು ವಿಧಾನಸಭೆಯ ಹೆಚ್ಚುವರಿ ಕಾರ್ಯದರ್ಶಿ ಬಿ.ಸುಬ್ರಮಣಿಯಂ ಘೋಷಿಸಿದ್ದಾರೆ.
ಕಮಲ ಹಾಸನ್(ಎಂಎನ್‌ಎಂ),ಸಲ್ಮಾ ಮತ್ತು ವಿಲ್ಸನ್ ಜೊತೆಗೆ ಡಿಎಂಕೆಯ ಎಸ್.ಆರ್.ಶಿವಲಿಂಗಂ, ಎಐಎಡಿಎಂಕೆಯ ಐ.ಎಸ್.ಇನ್ಬದುರೈ ಮತ್ತು ಎಂ.ಧನಪಾಲ್ ಅವರೂ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಜು.2031ರವರೆಗೆ ಆರು ವರ್ಷಗಳ ಅವಧಿಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.
ನೂತನ ಸದಸ್ಯರ ಆಯ್ಕೆಯೊಂದಿಗೆ ರಾಜ್ಯಸಭೆಯಲ್ಲಿ ಡಿಎಂಕೆಯ ಸದಸ್ಯಬಲ 10ರಲ್ಲಿಯೇ ಉಳಿದುಕೊಳ್ಳಲಿದ್ದು, ಎಐಎಡಿಎಂಕೆ ಬಲ ಈಗಿನ ಐದರಿಂದ ಆರಕ್ಕೇರಲಿದೆ. ಹಿಂದೆ ಹಾಲಿ ರಾಜ್ಯಸಭಾ ಸದಸ್ಯ ಹಾಗೂ ಮೈತ್ರಿಕೂಟದ ಪಾಲುದಾರ ಡಾ.ಅನ್ಬುಮಣಿ ರಾಮದಾಸ್ ಅವರಿಗೆ ಒಂದು ಸ್ಥಾನವನ್ನು ಹಂಚಿಕೆ ಮಾಡಿದ್ದ ಎಐಎಡಿಎಂಕೆ ಈ ಸಲ ಅದನ್ನು ತಾನೇ ಉಳಿಸಿಕೊಳ್ಳಲು ನಿರ್ಧರಿಸಿತ್ತು. ಡಿಎಂಕೆ,ಎಂಎನ್‌ಎಂ ಮತ್ತು ಎಐಎಡಿಎಂಕೆ ಅಲ್ಲದೆ ತಮಿಳುನಾಡಿನ ಕಾಂಗ್ರೆಸ್(ಪಿ.ಚಿದಂಬರಂ) ಮತ್ತು ಟಿಎಂಸಿ(ಜಿ.ಕೆ.ವಾಸನ್) ಕೂಡ ರಾಜ್ಯಸಭೆಯಲ್ಲಿ ತಲಾ ಓರ್ವ ಸದಸ್ಯರನ್ನು ಹೊಂದಿವೆ.