ಗೋವಾ ವಿಧಾನ ಸಭೆ ಸ್ಪೀಕರ್ ರಮೇಶ್ ತಾವಡ್ಕ ರಾಜೀನಾಮೆ; ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ರಮೇಶ್ ತಾವಡ್ಕ | PC : NDTV
ಪಣಜಿ, ಆ. 21: ಬಿಜೆಪಿ ಶಾಸಕರಾದ ರಮೇಶ್ ತಾವಡ್ಕರ್ ಹಾಗೂ ದಿಗಂಬರ್ ಕಾಮತ್ ಶುಕ್ರವಾರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಗೋವಾ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮೇಶ್ ತಾವಡ್ಕರ್ ಹಾಗೂ ದಿಗಂಬರ ಕಾಮತ್ ಅವರಿಗೆ ರಾಜ್ಯಪಾಲ ಗಜಪತಿ ರಾಜು ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರಮೋದ್ ಸಾವಂತ್, ಬಿಜೆಪಿಯ ಗೋವಾ ಘಟಕದ ಅಧ್ಯಕ್ಷ ದಾಮು ನಾಯ್ಕ್ ಹಾಗೂ ಇತರರು ಪಾಲ್ಗೊಂಡಿದ್ದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಗಂಟೆಗಳ ಮುನ್ನ ರಮೇಶ್ ತಾವಡ್ಕರ್ ಗೋವಾ ವಿಧಾನ ಸಭೆಯ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
57 ವರ್ಷದ ಬಿಜೆಪಿ ನಾಯಕ ರಮೇಶ್ ತಾವಡ್ಕರ್ ಅವರು ಕಾಣಕೋಣ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ದಕ್ಷಿಣ ಗೋವಾದ ಪೊಯಿಂಗುನಿಮ್ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಮೂಲಕ 2005ರಲ್ಲಿ ಅವರು ಮೊದಲ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿದ್ದರು.