ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ಗೆ ಪಾಕ್ ವಿರೋಧಿಯಾಗಿದ್ದಕ್ಕೆ ಆರು ಕೊಲ್ಲಿ ದೇಶಗಳಲ್ಲಿ ನಿಷೇಧ
ಚಿತ್ರ : ಧುರಂಧರ್
ಮುಂಬೈ,ಡಿ.12: ರಣ್ವೀರ್ ಸಿಂಗ್ ಅವರು ನಾಯಕನಾಗಿ ನಟಿಸಿರುವ ಆದಿತ್ಯ ಧರ್ ಅವರ ಇತ್ತೀಚಿನ ಬಾಲಿವುಡ್ ಚಿತ್ರ ‘ಧುರಂಧರ್’ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಪಾಕಿಸ್ತಾನ ವಿರೋಧಿ ನಿರೂಪಣೆಯಿಂದಾಗಿ ಚಿತ್ರವನ್ನು ಬಹರೇನ್, ಕುವೈತ್,ಒಮಾನ್,ಖತರ್,ಯುಎಇ ಮತ್ತು ಸೌದಿ ಅರೇಬಿಯಗಳಲ್ಲಿ ನಿಷೇಧಿಸಲಾಗಿದೆ.
ಗಡಿಯಾಚೆಯ ವಿಷಯವನ್ನು ಹೊಂದಿರುವ ಭಾರತೀಯ ಚಿತ್ರಗಳು ಕೊಲ್ಲಿ ದೇಶಗಳಲ್ಲಿ ಕಠಿಣ ಪರಿಶೀಲನೆಯನ್ನು ಎದುರಿಸುತ್ತಿರುವುದಕ್ಕೆ ಇದು ಇನ್ನೊಂದು ನಿದರ್ಶನವಾಗಿದೆ.
ಬಾಲಿವುಡ್ ಚಿತ್ರವೊಂದು ಮಧ್ಯಪ್ರಾಚ್ಯದಲ್ಲಿ ನಿಷೇಧವನ್ನು ಎದುರಿಸಿದ್ದು ಇದೇ ಮೊದಲ ಸಲವೇನಲ್ಲ. ಈ ಹಿಂದೆ ಫೈಟರ್,ಸ್ಕೈ ಫೋರ್ಸ್,ದಿ ಡಿಪ್ಲೋಮ್ಯಾಟ್,ಆರ್ಟಿಕಲ್ 370,ಟೈಗರ್ 3 ಮತ್ತು ದಿ ಕಾಶ್ಮೀರ ಫೈಲ್ಸ್ ಸೇರಿದಂತೆ ಹಲವಾರು ಹೈ-ಪ್ರೊಫೈಲ್ ಚಿತ್ರಗಳು ಕೊಲ್ಲಿಯ ಕೆಲವು ದೇಶಗಳಲ್ಲಿ ನಿರ್ಬಂಧಗಳನ್ನು ಎದುರಿಸಿದ್ದವು. ಫೈಟರ್‌ನಂತಹ ಕೆಲವು ಪ್ರಕರಣಗಳಲ್ಲಿ ಚಿತ್ರವು ಯುಎಇಯಲ್ಲಿ ಬಿಡುಗಡೆಗೊಂಡಿದ್ದರೂ ಮರುದಿನವೇ ಅದರ ಪ್ರದರ್ಶನವನ್ನು ನಿಷೇಧಿಸಲಾಗಿತ್ತು. ಪರಿಷ್ಕೃತ ಆವೃತ್ತಿಯನ್ನೂ ತಿರಸ್ಕರಿಸಲಾಗಿತ್ತು.
ಧುರಂಧರ್ ಚಿತ್ರದಲ್ಲಿ ರಣ್ವೀರ್ ಸಿಂಗ್, ಸಂಜಯ ದತ್, ಅಕ್ಷಯ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಧರ್ ಅವರು 2019ರ ಹಿಟ್ ಚಿತ್ರ ‘ಉಡಿ:ದಿ ಸರ್ಜಿಕಲ್ ಸ್ರೈಕ್’ನ ಆರು ವರ್ಷಗಳ ಬಳಿಕ ಈ ಸ್ಪೈಥ್ರಿಲ್ಲರ್‌ನ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರವು ನೈಜ ಜಗತ್ತಿನ ಭೌಗೋಳಿಕ ರಾಜಕೀಯ, ರಹಸ್ಯ ‘ರಾ’ ಕಾರ್ಯಾಚರಣೆಗಳು ಮತ್ತು ಪಾಕಿಸ್ತಾನದಲ್ಲಿಯ ಆಪರೇಷನ್ ಲಿಯಾರಿಯಿಂದ ಪ್ರೇರಿತವಾಗಿದ್ದು,ಇದು ವಾಸ್ತವಿಕ ಮತ್ತು ಆ್ಯಕ್ಷನ್ ಪ್ಯಾಕ್ಡ್ ಕಥೆಗಳನ್ನು ಬಯಸುವ ವೀಕ್ಷಕರನ್ನು ಹೆಚ್ಚಾಗಿ ಸೆಳೆದಿದೆ.
ಕೊಲ್ಲಿ ದೇಶಗಳಲ್ಲಿ ನಿಷೇಧದ ಹೊರತಾಗಿಯೂ ಧುರಂಧರ್ ನ ಗಳಿಕೆ ಹೆಚ್ಚುತ್ತಲೇ ಇದೆ. ಚಿತ್ರದ ಆದಾಯವು ಭಾರತದಲ್ಲಿ ಒಂದು ವಾರದೊಳಗೆ 200 ಕೋ.ರೂ.ಗಳನ್ನು ದಾಟಿದ್ದು,ಕೊಲ್ಲಿ ಪ್ರದೇಶವನ್ನು ಹೊರತುಪಡಿಸಿ ವಿದೇಶಗಳಲ್ಲಿ 44.5 ಕೋ.ರೂ.ಗಳನ್ನು ಗಳಿಸಿದೆ.
ಈ ನಡುವೆ ಒಟಿಟಿಯಲ್ಲಿ ಧುರಂಧರ್ ಬಿಡುಗಡೆಯ ಕುರಿತು ಊಹಾಪೋಹಗಳು ಹೆಚ್ಚುತ್ತಿವೆ. ವರದಿಗಳು ಸೂಚಿಸಿರುವಂತೆ ಭಾರತದ ಬೃಹತ್ ಒಟಿಟಿ ಪ್ಲ್ಯಾಟ್‌ಫಾರ್ಮ್‌ವೊಂದು ಧುರಂದರ್ ಚಿತ್ರದ ಡಿಜಿಟಲ್ ಹಕ್ಕುಗಳನ್ನು 130 ಕೋ.ರೂ.ಗೆ ಖರೀದಿಸಿದೆ. ಚಿತ್ರದ ಒಟಿಟಿ ಸ್ಟ್ರೀಮಿಂಗ್ ದಿನಾಂಕಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.