ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಅತ್ಯಾಚಾರ ಆರೋಪಿಯಿಂದ ಬಾಲಕಿ ಮೇಲೆ ದೌರ್ಜನ್ಯ
ಸಾಂದರ್ಭಿಕ ಚಿತ್ರ | Photo Credit : freepik
ಪಾಟ್ನಾ: ಅತ್ಯಾಚಾರ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 35 ವರ್ಷದ ಆರೋಪಿಯೊಬ್ಬ, ಅಪ್ರಾಪ್ತ ವಯಸ್ಸಿನ ಮತ್ತೊಬ್ಬ ಬಾಲಕಿಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಿಹಾರದ ಮುಜಾಫರ್‍ಪುರ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಆರೋಪಿಯನ್ನು ರವಿವಾರ ಮತ್ತೆ ಬಂಧಿಸಲಾಗಿದೆ.
ದಿವ್ಯಪ್ರಕಾಶ್ ಅಲಿಯಾಸ್ ಅಭಿನವ್ ಎಂಬ ಆರೋಪಿ ಎಲ್‍ಜೆಪಿ-ಆರ್‍ವಿ ಪಕ್ಷದ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ. ಆರೋಪಿಯನ್ನು ಪಕ್ಷದಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಮುಖಂಡ ಪವನ್‍ಕುಮಾರ್ ಹೇಳಿದ್ದಾರೆ.
13 ವರ್ಷದ ಬಾಲಕಿಯ ಪೋಷಕರು ನಿದ್ರಿಸುತ್ತಿದ್ದ ವೇಳೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ಮನೆಯ ಜಗುಲಿಯಲ್ಲಿ ತಂದೆ ಮಲಗಿದ್ದಾಗ ಕಿಟಕಿ ಬಳಿ ಶಬ್ದವಾದದ್ದು ಕೇಳಿ ಎಚ್ಚರಗೊಂಡಿದ್ದಾರೆ. ಕಿಟಕಿಯ ಪ್ಲೈವುಡ್ ತೆಗೆದಿರುವುದು ಕಂಡುಬಂತು ಹಾಗೂ ಭಯದಿಂದ ಬಾಲಕಿ ಬೆಡ್ ಅಡಿಯಲ್ಲಿ ಹುದುಗಿಕೊಂಡಿದ್ದಳು. ಕಿಟಕಿ ಮುರಿದು ಒಳಗೆ ನುಗ್ಗಿದ ಆರೋಪಿ, ಕೊಲೆ ಬೆದರಿಕೆ ಹಾಕಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಲಾಗಿದೆ.
ಆಕೆಯ ಆಕ್ರಂದನ ಕೇಳಿ ತಂದೆ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಆರೋಪಿ ಜತೆ ಜಗಳ ನಡೆದಿದ್ದು, ಸ್ವಲ್ಪ ಸಮಯದಲ್ಲಿ ಆತ ಪರಾರಿಯಾದ. ಈ ಬಗ್ಗೆ ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದ್ದು, ಉದ್ರಿಕ್ತ ಗ್ರಾಮಸ್ಥರು ಆರೋಪಿಯ ಮನೆಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ವಿವಿಧ ಠಾಣೆಗಳಿಂದ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು.