×
Ad

ಪೊಲೀಸರಿಂದ ಅತ್ಯಾಚಾರ: 30 ವರ್ಷ ಬಳಿಕ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ಮಹಿಳೆ!

Update: 2023-07-27 07:58 IST

ಆಗ್ರಾ: ಪ್ರತ್ಯೇಕ ಉತ್ತರಾಖಂಡ ರಾಜ್ಯಕ್ಕೆ ಆಗ್ರಹಿಸಿ ಉತ್ತರ ಪ್ರದೇಶದ ರಾಂಪುರ ತಿರಾಹದಲ್ಲಿ 1994ರಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗುಂಪಿನಲ್ಲಿದ್ದ ಮಹಿಳೆಯ ಮೇಲೆ ಪೊಲೀಸರು ಅತ್ಯಾಚಾರ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ 30 ವರ್ಷಗಳ ಬಳಿಕ ಮಹಿಳೆ ಮುಜಾಫರ ನಗರ ಕೋರ್ಟ್‍ನಲ್ಲಿ ಸಾಕ್ಷಿ ಹೇಳಿದ ಅಪರೂಪದ ಘಟನೆ ವರದಿಯಾಗಿದೆ.

ಘಟನೆ ನಡೆದಾಗ 30 ವರ್ಷ ವಯಸ್ಸಿನವರಾಗಿದ್ದ ಮಹಿಳೆಗೆ ಇದೀಗ 60 ವರ್ಷ ವಯಸ್ಸಾಗಿದ್ದು, ಸಂತ್ರಸ್ತೆಯಾಗಿ ಮತ್ತು ಸಾಕ್ಷಿಯಾಗಿ ಇದೇ ಮೊದಲ ಬಾರಿಗೆ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿದರು. "ಅತ್ಯಾಚಾರ ಸಂತ್ರಸ್ತೆಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶಕ್ತಿ ಸಿಂಗ್ ಅವರ ಮುಂದೆ (ಕೋರ್ಟ್ ನಂ. 7) ಸಿಬಿಐ ಅಧಿಕಾರಿಗಳು ಹಾಜರುಪಡಿಸಿದರು" ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ಅಭಿಯೋಜಕ ಪರ್ವೀಂದರ್ ಸಿಂಗ್ ಹೇಳಿದ್ದಾರೆ.

ಸಂತ್ರಸ್ತೆ ತನ್ನ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಕೆಗೆ ಭದ್ರತೆಯನ್ನು ಬಿಗಿಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಕೋರ್ಟ್ ಕಲಾಪದ ಸಂದರ್ಭದಲ್ಲಿ ಮಹಿಳೆ ಮತ್ತು ಆಕೆಯ ವಕೀಲರನ್ನು ಹೊರತುಪಡಿಸಿ ಯಾರಿಗೂ ಕೋರ್ಟ್ ಹಾಲ್‍ಗೆ ಪ್ರವೇಶ ನೀಡಿರಲಿಲ್ಲ.

"ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಆಗಸ್ಟ್ 2ಕ್ಕೆ ನಿಗದಿಪಡಿಸಿದ ಬಳಿಕ ಮಹಿಳೆಯನ್ನು ಬಿಗಿ ಭದ್ರತೆಯಲ್ಲಿ ಮನೆಗೆ ವಾಪಾಸ್ಸು ಕಳುಹಿಸಲಾಗಿದೆ. ಇದೇ ಮೊದಲ ಬಾರಿಗೆ ಅತ್ಯಾಚಾರದ ದೂರು ನೀಡಿದ ಮಹಿಳೆ ಉತ್ತರಾಖಂಡ ಪೊಲೀಸರ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಅಪರಾಧ ದಂಡಸಂಹಿತೆಯ ಸೆಕ್ಷನ್ 164ರ ಅನ್ವಯ ಅವರು ನೀಡಿದ ಹೇಳಿಕೆಗೆ ಪೂರಕವಾಗಿ ಸಾಕ್ಷಿ ಹೇಳಿದ್ದಾರೆ" ಎಂದು ಜಿಲ್ಲಾ ಸರ್ಕಾರಿ ಅಭಿಯೋಜಕ ರಾಜೀವ್ ಶರ್ಮಾ ವಿವರ ನೀಡಿದ್ದಾರೆ.

1994ರ ಅಕ್ಟೋಬರ್ 1ರಂದು ನೂರಾರು ಮಂದಿ ಹೋರಾಟಗಾರರು ಉತ್ತರಾಖಂಡದ ಬೆಟ್ಟ ಪ್ರದೇಶದಿಂದ ದೆಹಲಿಗೆ ಜಾಥಾ ನಡೆಸುವ ವೇಳೆ ಪೊಲೀಸರು ರಾಂಪುರ ತಿರಾಹಾದಲ್ಲಿ ತಡೆದಿದ್ದರು. ಈ ವೇಳೆ ಸಂಭವಿಸಿದ ಸಂಘರ್ಷದ ಸಂದರ್ಭ ಪೊಲೀಸರು ಗುಂಡು ಹಾರಿಸಿದಾಗ ಆರು ಮಂದಿ ಮೃತಪಟ್ಟು ಹಲವು ಗಾಯಗೊಂಡಿದ್ದರು. ಬಳಿಕ ಅಪ್ರಾಪ್ತ ವಯಸ್ಸಿನವರು ಸೇರಿದಂತೆ ಹಲವು ಮಹಿಳೆಯರ ವಿರುದ್ಧ ಪೊಲೀಸರು ಅತ್ಯಾಚಾರ ನಡೆಸಿದ್ದಾರೆ ಎಂದು ಆಪಾದಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News