×
Ad

ಭಾರತ-ಪಾಕ್ ಉದ್ವಿಗ್ನತೆ: ಪಿ‌ಎಸ್‌ಎಲ್ ಕ್ರೀಡಾಕೂಟವನ್ನು ಯುಎಇಗೆ ಸ್ಥಳಾಂತರಿಸಿದ ಪಿಸಿಬಿ

Update: 2025-05-09 11:56 IST

Photo credit: X

ಲಾಹೋರ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹಿನ್ನಲೆ ಪಾಕಿಸ್ತಾನ ಸೂಪರ್ ಲೀಗ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ವಿದೇಶಿ ಆಟಗಾರರು ಗಾಬರಿಗೊಳಗಾಗಿದ್ದಾರೆ. ಹೀಗಾಗಿ, ಈ ಕ್ರೀಡಾಕೂಟದ ಉಳಿದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲು ಶುಕ್ರವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ರಾವಲ್ಪಿಂಡಿ, ಮುಲ್ತಾನ್ ಹಾಗೂ ಲಾಹೋರ್‌ನಲ್ಲಿ ನಿಗದಿಯಾಗಿದ್ದ ಉಳಿದ ಎಂಟು ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಇಂದು (ಶುಕ್ರವಾರ) ಬೆಳಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ಸ್ಥಳಾಂತರಗೊಳ್ಳಲಿರುವ ಪಂದ್ಯಗಳ ವೇಳಾಪಟ್ಟಿ ಹಾಗೂ ಸ್ಥಳಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ಪಾಕಿಸ್ತಾನ ಸೂಪರ್ ಲೀಗ್‌ಗೆ ಅಡ್ಡಿಯುಂಟು ಮಾಡಲು ಭಾರತವು ಪಾಕಿಸ್ತಾನದೊಳಗೆ ನಡೆಸಿದ ವಾಯು ದಾಳಿಯಲ್ಲಿ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣವನ್ನು ಗುರಿಯಾಗಿಸಿಕೊಂಡಿತ್ತು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಆರೋಪಿಸಿದ್ದಾರೆ.

ಆದರೆ, ಈ ಆರೋಪಗಳನ್ನು ಅಲ್ಲಗಳೆದಿರುವ ಭಾರತೀಯ ರಕ್ಷಣಾ ಸಚಿವಾಲಯ, ಬುಧವಾರ ರಾತ್ರಿ ಪಾಕಿಸ್ತಾನವು ಭಾರತದ ಉತ್ತರ ಹಾಗೂ ಪಶ್ಚಿಮ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು 15 ಸ್ಥಳಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದರಿಂದ, ಗುರುವಾರದಂದು ಪಾಕಿಸ್ತಾನದ ರಕ್ಷಣಾ ರಡಾರ್‌ಗಳು ಹಾಗೂ ರಕ್ಷಣಾ ವ್ಯವಸ್ಥೆಯನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News