2024-25ರಲ್ಲಿ ನಿವ್ವಳ ಎಫ್‌ಡಿಐ ಶೇ.96ರಷ್ಟು ಕುಸಿತ: ಆರ್‌ಬಿಐ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಆರ್‌ಬಿಐ ಬುಧವಾರ ಬಿಡುಗಡೆಗೊಳಿಸಿರುವ ದತ್ತಾಂಶಗಳು 2024-25ರ ವಿತ್ತವರ್ಷದಲ್ಲಿ ಭಾರತದಲ್ಲಿ ನಿವ್ವಳ ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ಯು ಶೇ.96ರಷ್ಟು ಕುಸಿದು 353 ಮಿಲಿಯನ್ ಡಾಲರ್‌ಗೆ ತಲುಪಿದೆ ಎಂದು ತೋರಿಸಿವೆ.
ನಿವ್ವಳ ಎಫ್‌ಡಿಐ 2022-23ರಲ್ಲಿ 28 ಶತಕೋಟಿ ಡಾ.ಮತ್ತು 2023-24ರಲ್ಲಿ 10.1 ಶತಕೋಟಿ ಡಾ.ಆಗಿತ್ತು.
ನಿವ್ವಳ ಎಫ್‌ಡಿಐ ವಿದೇಶಿ ಹೂಡಿಕೆಯ ಒಟ್ಟು ಒಳಹರಿವು ಮತ್ತು ಭಾರತದಲ್ಲಿಯ ಕಂಪನಿಗಳು ಹೊರಗೆ ರವಾನಿಸುವ ವಿದೇಶಿ ಹೂಡಿಕೆಯ ನಡುವಿನ ವ್ಯತ್ಯಾಸವಾಗಿದೆ.
ಭಾರತೀಯ ಕಂಪನಿಗಳಿಂದ ವಿದೇಶಗಳಲ್ಲಿ ಹೆಚ್ಚುತ್ತಿರುವ ಹೂಡಿಕೆಗಳು ಮತ್ತು ಸಾಗರೋತ್ತರ ಹೂಡಿಕೆದಾರರಿಂದ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯ ಹಿಂದೆಗೆತ ಇವು ನಿವ್ವಳ ಎಫ್‌ಡಿಐ ಕುಸಿತಕ್ಕೆ ಕಾರಣಗಳಾಗಿವೆ ಎಂದು ಆರ್‌ಬಿಐ ತನ್ನ ಮಾಸಿಕ ಬುಲೆಟಿನ್‌ನಲ್ಲಿ ತಿಳಿಸಿದೆ.
ಇದು ವಿದೇಶಿ ಹೂಡಿಕೆದಾರರು ಸರಾಗವಾಗಿ ಪ್ರವೇಶಿಸಬಹುದಾದ ಮತ್ತು ನಿರ್ಗಮಿಸಬಹುದಾದ ಪ್ರಬುದ್ಧ ಮಾರುಕಟ್ಟೆಯ ಸಂಕೇತವಾಗಿದ್ದು,ಭಾರತೀಯ ಆರ್ಥಿಕತೆಯ ಮೇಲೆ ಸಕಾರಾತ್ಮಕವಾಗಿ ಪ್ರತಿಫಲಿಸುತ್ತದೆ ಎಂದು ಆರ್‌ಬಿಐ ಹೇಳಿದೆ.
ಭಾರತದಲ್ಲಿ ವ್ಯವಹರಿಸುತ್ತಿರುವ ವಿದೇಶಿ ಕಂಪನಿಗಳಿಂದ ಹೂಡಿಕೆ ಹಿಂದೆಗೆತ 2024-25ರಲ್ಲಿ 51.5 ಶತಕೋಟಿ ಡಾ.ಗೆ ಏರಿಕೆಯಾಗಿದ್ದು,ಇದು ಸುಮಾರು ಒಂದು ದಶಕದಲ್ಲಿ ಅತ್ಯಂತ ಹೆಚ್ಚಿನ ಮೊತ್ತವಾಗಿದೆ. ಹಿಂದಿನ ವಿತ್ತವರ್ಷದಲ್ಲಿ ಇದು 44.5 ಶತಕೋಟಿ ಡಾ.ಆಗಿತ್ತು.
ಆದಾಗ್ಯೂ ಹಿಂದಿನ ವರ್ಷ 71.3 ಶತಕೋಟಿ ಡಾ.ಗಳಷ್ಟಿದ್ದ ಒಟ್ಟು ಎಫ್‌ಡಿಐ 2024-25ರಲ್ಲಿ 81 ಶತಕೋಟಿ ಡಾ.ಗೆ ಏರಿಕೆಯಾಗಿತ್ತು. ಒಟ್ಟು ಎಫ್‌ಡಿಐ ವಿದೇಶಿ ಸಂಸ್ಥೆಗಳು ಭಾರತದಲ್ಲಿಯ ಉತ್ಪಾದಕ ಆಸ್ತಿಗಳಲ್ಲಿ ನೇರವಾಗಿ ಮಾಡುವ ಹೂಡಿಕೆಯಾಗಿದೆ. 2022-23ರಲ್ಲಿ ಇದು 71.4 ಶತಕೋಟಿ ಡಾ.ಆಗಿತ್ತು.
ಒಟ್ಟು ಎಫ್‌ಡಿಐ ಒಳಹರಿವು ತಯಾರಿಕೆ,ಹಣಕಾಸು ಸೇವೆಗಳು,ವಿದ್ಯುತ್ ಮತ್ತು ಇತರ ಇಂಧನ ಹಾಗೂ ಸಂವಹನ ಸೇವೆಗಳ ವಲಯಗಳಲ್ಲಿ ಕೇಂದ್ರೀಕೃತವಾಗಿದ್ದು,ಶೇ.60ಕ್ಕೂ ಅಧಿಕ ಪಾಲನ್ನು ಹೊಂದಿದೆ ಎಂದು ಆರ್‌ಬಿಐ ತಿಳಿಸಿದೆ.
2024-25ರಲ್ಲಿ ಶೇ.75ಕ್ಕಿಂತ ಹೆಚ್ಚಿನ ಎಫ್‌ಡಿಐ ಸಿಂಗಾಪುರ,ಮಾರಿಷಿಯಸ್,ಯುಎಇ,ನೆದರ್‌ಲ್ಯಾಂಡ್ಸ್ ಮತ್ತು ಅಮೆರಿಕದಿಂದ ಹರಿದುಬಂದಿತ್ತು.
2024-25ರಲ್ಲಿ ಎಫ್‌ಡಿಐ ಹಿಂದೆಗೆತ 29.2 ಶತಕೋಟಿ ಡಾ.ಗೆ ಏರಿಕೆಯಾಗಿದ್ದರೆ,ಇದು 2023-24ರಲ್ಲಿ 16.7 ಶತಕೋಟಿ ಡಾ. ಮತ್ತು 2022-23ರಲ್ಲಿ 14 ಶತಕೋಟಿ ಡಾ.ಆಗಿತ್ತು ಎಂದು ಆರ್‌ಬಿಐ ವರದಿ ತಿಳಿಸಿದೆ.