×
Ad

ಕಳೆದ 6 ವರ್ಷಗಳ ಪೈಕಿ 24-25ರಲ್ಲಿ ಅತ್ಯಧಿಕ 500 ರೂ.ವಿನ ನಕಲಿ ನೋಟುಗಳು: ಆರ್‌ಬಿಐ ವರದಿ

Update: 2025-05-30 19:22 IST

PC : PTI

ಹೊಸದಿಲ್ಲಿ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾಗಿರುವ 500 ರೂ.ಗಳ ನಕಲಿ ನೋಟುಗಳ ಸಂಖ್ಯೆ 2024-25ರಲ್ಲಿ ಶೇ.37.5ಕ್ಕೆ ಹೆಚ್ಚಳವಾಗಿದೆ. ಇದು ವಿತ್ತವರ್ಷ 2020ರಿಂದ ಆರು ವರ್ಷಗಳ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯು ತೋರಿಸಿದೆ.

200 ರೂ.ಗಿಂತ ಕಡಿಮೆ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.13.9ರಷ್ಟು ಏರಿಕೆಯನ್ನು ದಾಖಲಿಸಿದ್ದು, ವಿತ್ತವರ್ಷ 2025ರಲ್ಲಿ 32,600ನ್ನು ತಲುಪಿದೆ. ಇನ್ನೊಂದಡೆ ವಿತ್ತವರ್ಷ 25ರಲ್ಲಿ ಪತ್ತೆಯಾಗಿರುವ 100 ರೂ.ಗಳ ನಕಲಿ ನೋಟುಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.23ರಷ್ಟು ಇಳಿಕೆಯಾಗಿದ್ದು, 51,069ರಷ್ಟಿದೆ.

ವಿತ್ತವರ್ಷ 24ರಲ್ಲಿ 26,035ರಷ್ಟು ಐದು ವರ್ಷಗಳ ಗರಿಷ್ಠ ಪ್ರಮಾಣದಲ್ಲಿದ್ದ ನಕಲಿ 2,000 ರೂ.ನೋಟುಗಳ ಸಂಖ್ಯೆ ವಿತ್ತವರ್ಷ 25ರಲ್ಲಿ ಶೇ.86.5ರಷ್ಟು ಕುಸಿತವನ್ನು ಕಂಡು 3,508ಕ್ಕೆ ಇಳಿದಿದೆ. ಕಳೆದ ವರ್ಷದ ಈ ಏರಿಕೆಗೆ 2,000 ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡಿದ್ದು ಮತ್ತು ಬ್ಯಾಂಕುಗಳಿಂದ ಈ ನೋಟುಗಳ ದೊಡ್ಡ ಪ್ರಮಾಣದ ಸಂಸ್ಕರಣೆ ಕಾರಣವೆನ್ನಲಾಗಿದೆ.

2,000 ರೂ.ಗಳ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಾಗಿ ಆರ್‌ಬಿಐ 19 ಮೇ 2023ರಂದು ಪ್ರಕಟಿಸಿತ್ತು. ಮೇ 19ರಂದು ವ್ಯವಹಾರದ ಅಂತ್ಯಕ್ಕೆ ಈ ನೋಟುಗಳ ಮೌಲ್ಯ 3.56 ಲ.ಕೋ.ರೂ.ಗಳಿದ್ದು,2025,ಎಪ್ರಿಲ್ 30ಕ್ಕೆ 6,266 ಕೋ.ರೂ.ಗೆ ಇಳಿದಿದೆ. ಅಂದರೆ,ಪ್ರಕಟಣೆಯ ಸಂದರ್ಭ ಚಲಾವಣೆಯಲ್ಲಿದ್ದ 2,000 ನೋಟುಗಳ ಪೈಕಿ ಶೇ.98.24ರಷ್ಟು ಬ್ಯಾಂಕುಗಳಿಗೆ ವಾಪಸಾಗಿವೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

500 ರೂ.ಗಳ ನಕಲಿ ನೋಟುಗಳಲ್ಲಿ ಏರಿಕೆಯಾಗಿದ್ದರೂ ಪತ್ತೆಯಾಗಿರುವ ನಕಲಿ ನೋಟುಗಳ ಒಟ್ಟು ಸಂಖ್ಯೆ ವಿತ್ತವರ್ಷ 24ರ 2,22,638ರಿಂದ ವಿತ್ತವರ್ಷ 25ರಲ್ಲಿ 2,17,396ಕ್ಕೆ ಇಳಿದಿದೆ. ಇತ್ತೀಚಿನ ವರ್ಷಗಳಲ್ಲಿ ನಕಲಿ ನೋಟುಗಳ ಪತ್ತೆಯಲ್ಲಿ ನಿರಂತರ ಇಳಿಮುಖ ಪ್ರವೃತ್ತಿಯನ್ನು ಆರ್‌ಬಿಐ ವರದಿ ಎತ್ತಿ ತೋರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News