×
Ad

ದ್ವೈಮಾಸಿಕ ಹಣಕಾಸು ನೀತಿ ಪ್ರಕಟ: ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

Update: 2025-08-06 14:51 IST

Photo credit: PTI

ಮುಂಬೈ: ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಬುಧವಾರ ಪ್ರಕಟಿಸಿರುವ ಆರ್‌ಬಿಐ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಯಿಂದಾಗಿ ರೂಪಾಯಿ ಒತ್ತಡದಲ್ಲಿರುವುದರಿಂದ ಶೇ.5.5ರ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಭಾರತೀಯ ಸರಕುಗಳ ಮೇಲೆ ಸುಂಕವನ್ನು ಹೆಚ್ಚಿಸುವುದಾಗಿ ಟ್ರಂಪ್ ಬೆದರಿಕೆಯೊಡ್ಡಿದ ಬಳಿಕ ಮಂಗಳವಾರ ರೂಪಾಯಿ 16 ಪೈಸೆಗಳಷ್ಟು ಕುಸಿದಿತ್ತು.

ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಸಭೆಯಲ್ಲಿ ಆರ್‌ಬಿಐ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಜೂನ್‌ನಲ್ಲಿ ಆರ್‌ಬಿಐ ಹಣದುಬ್ಬರ ಇಳಿಕೆಗೆ ಅನುಗುಣವಾಗಿ ರೆಪೊ ದರವನ್ನು 50 ಮೂಲ ಅಂಕಗಳಷ್ಟು ಕಡಿತಗೊಳಿಸಿತ್ತು.

ತಟಸ್ಥ ನಿಲುವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಹೇಳಿದ ಆರ್‌ಬಿಐ ಗವರ್ನರ್ ಸಂಜಯ ಮಲ್ಹೋತ್ರಾ ಅವರು,ಸುಂಕಗಳ ಕುರಿತು ಅನಿಶ್ಚಿತತೆ ಈಗಲೂ ಉಳಿದುಕೊಂಡಿದೆ. ಅಭಿವೃದ್ಧಿಶೀಲ ದತ್ತಾಂಶಗಳ ಮೇಲೆ ನಿಕಟ ನಿಗಾಯಿರಿಸಲು ಎಂಪಿಸಿ ನಿರ್ಧರಿಸಿದೆ ಎಂದು ತಿಳಿಸಿದರು.

ಸುಂಕ ಪ್ರಕಟಣೆಗಳು ಮತ್ತು ವ್ಯಾಪಾರ ಮಾತುಕತೆಗಳ ನಡುವೆ ಬಾಹ್ಯ ಬೇಡಿಕೆಗಳ ನಿರೀಕ್ಷೆಗಳು ಅನಿಶ್ಚಿತವಾಗಿಯೇ ಉಳಿದುಕೊಂಡಿವೆ ಎಂದು ಹೇಳಿದ ಮಲ್ಹೋತ್ರಾ, ದೀರ್ಘಕಾಲದಿಂದ ಹೊಗೆಯಾಡುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಬೆಳವಣಿಗೆಯ ಮುನ್ನೋಟಕ್ಕೆ ಅಪಾಯಗಳನ್ನು ಒಡ್ಡಿವೆ ಎಂದರು.

ಜಿಡಿಪಿ ಬೆಳವಣಿಗೆಯ ಮುನ್ನೋಟ

ಪ್ರಸಕ್ತ ಹಣಕಾಸು ವರ್ಷಕ್ಕಾಗಿ ಅಂದಾಜಿಸಲಾಗಿರುವ ನೈಜ ಜಿಡಿಪಿ ಶೇ.6.5 ಆಗಿದ್ದು,ಇದು ಜಾಗತಿಕ ಕಳವಳಗಳಿದ್ದರೂ ನಿರಂತರ ಬೆಳವಣಿಗೆಯ ನಿರೀಕ್ಷೆಯನ್ನು ಪ್ರತಿಬಿಂಬಿಸುತ್ತಿದೆ. ಅಲ್ಲದೆ, ರಶ್ಯಾದೊಂದಿಗೆ ವ್ಯಾಪಾರಕ್ಕಾಗಿ ಭಾರತವು ‘ಸತ್ತ ಆರ್ಥಿಕತೆ’ ಎಂಬ ಟ್ರಂಪ್ ಟೀಕೆಗೆ ತಿರುಗೇಟನ್ನೂ ನೀಡಿದೆ.

ಮೊದಲ ತ್ರೈಮಾಸಿಕದಲ್ಲಿ ಶೇ.6.5,ದ್ವಿತೀಯ ತ್ರೈಮಾಸಿಕದಲ್ಲಿ ಶೇ.6.7,ತೃತೀಯ ತ್ರೈಮಾಸಿಕದಲ್ಲಿ ಶೇ.6.6 ಮತ್ತು ಚತುರ್ಥ ತ್ರೈಮಾಸಿಕದಲ್ಲಿ ಶೇ.6.3ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಆರ್‌ಬಿಐ ಬೆಳವಣಿಗೆಯನ್ನು ಬೆಂಬಲಿಸಲು ನಿರ್ಣಾಯಕ ಕ್ರಮಗಳನ್ನು ತೆಗದುಕೊಂಡಿದೆ ಎಂದು ಮಲ್ಹೋತ್ರಾ ತಿಳಿಸಿದರು.

ಹಣದುಬ್ಬರ

ಆಹಾರ ಬೆಲೆಗಳಲ್ಲಿ ಏರಿಳಿತಗಳಿಂದಾಗಿ ಮುಖ್ಯ ಹಣದುಬ್ಬರವು ಕಡಿಮೆಯಾಗಿದೆ,ಆದರೆ ಕಳೆದ ತ್ರೈಮಾಸಿಕದಿಂದ ಇದು ಹೆಚ್ಚಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಪ್ರಸಕ್ತ ವಿತ್ತವರ್ಷಕ್ಕಾಗಿ ಹಣದುಬ್ಬರ ಮುನ್ನೋಟವು ಜೂನ್‌ನಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಅನುಕೂಲಕರವಾಗಿದೆ ಎಂದು ಹೇಳಿದ ಮಲ್ಹೋತ್ರಾ,ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವು ಶೇ.4ಕ್ಕಿಂತ ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News