ಮಣಿಕರ್ಣಿಕಾ ಘಾಟ್ ನ ಪುನರಾಭಿವೃದ್ಧಿ: ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ
ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ, ಜ.15: ಇಲ್ಲಿಯ ಮಣಿಕರ್ಣಿಕಾ ಘಾಟ್ ನ ಪುನರಾಭಿವೃದ್ಧಿ ಕುರಿತು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆತ್ತಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ತಮ್ಮ ಸ್ವಂತ ನಾಮಫಲಕವನ್ನು ಹಾಕಿಕೊಳ್ಳಲು ಪ್ರತಿಯೊಂದೂ ಐತಿಹಾಸಿಕ ಪರಂಪರೆಯನ್ನು ಅಳಿಸಲು ಅವರು ಬಯಸಿದ್ದಾರೆ ಎಂದು ಆರೋಪಿಸಿದ್ದಾರೆ.
ಗುಪ್ತರ ಯುಗದ್ದೆಂದು ಉಲ್ಲೇಖಿಸಲಾಗಿರುವ ಮತ್ತು ನಂತರ ಲೋಕಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರಿಂದ ನವೀಕರಿಸಲ್ಪಟ್ಟಿದ್ದ ಅಪರೂಪದ ಪ್ರಾಚೀನ ಸ್ಮಾರಕ ಮಣಿಕರ್ಣಿಕಾ ಘಾಟ್‌ನ್ನು ಪುನರಾಭಿವೃದ್ಧಿಯ ನೆಪದಲ್ಲಿ ನೆಲಸಮಗೊಳಿಸಿದ ಅಪರಾಧವನ್ನು ನೀವು ಎಸಗಿದ್ದೀರಿ ಎಂದು ಖರ್ಗೆ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಸುಂದರೀಕರಣ ಮತ್ತು ವಾಣಿಜ್ಯೀಕರಣದ ಹೆಸರಿನಲ್ಲಿ ವಾರಣಾಸಿಯಲ್ಲಿನ ಶತಮಾನಗಳಷ್ಟು ಹಳೆಯದಾದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ನೆಲಸಮಗೊಳಿಸಲು ಮೋದಿ ಬುಲ್ಡೋಜರ್‌ಗಳಿಗೆ ಆದೇಶಿಸಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ. ‘ಮೋದಿಜಿ… ನೀವು ಪ್ರತಿಯೊಂದೂ ಐತಿಹಾಸಿಕ ಪರಂಪರೆಯನ್ನು ಅಳಿಸಿ ನಿಮ್ಮ ಹೆಸರನ್ನು ಹಾಕಿಕೊಳ್ಳಲು ಬಯಸಿದ್ದೀರಿ’ ಎಂದು ಅವರು ಕುಟುಕಿದ್ದಾರೆ.
ಮಣಿಕರ್ಣಿಕಾ ಘಾಟ್ ನ ಪುನರಾಭಿವೃದ್ಧಿಯಡಿ ನಡೆದ ನೆಲಸಮ ಕಾರ್ಯಾಚರಣೆಯನ್ನು ವಿರೋಧಿಸಿರುವ ಪ್ರತಿಭಟನಾಕಾರರು, ಶತಮಾನಗಳಷ್ಟು ಹಳೆಯದಾದ ಅಹಿಲ್ಯಾಬಾಯಿ ಹೋಳ್ಕರ್ ಪ್ರತಿಮೆಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ.
ಕಾರಿಡಾರ್ ನಿರ್ಮಾಣದ ಹೆಸರಿನಲ್ಲಿ ಹಲವಾರು ಸಣ್ಣ ಮತ್ತು ದೊಡ್ಡ ದೇವಸ್ಥಾನಗಳು ಹಾಗೂ ಆರಾಧನಾ ಸ್ಥಳಗಳನ್ನು ಕೆಡವಲಾಗಿದೆ. ಈಗ ಪ್ರಾಚೀನ ಘಾಟ್‌ಗಳ ಸರದಿಯಾಗಿದೆ ಎಂದು ಖರ್ಗೆ ಹೇಳಿದ್ದಾರೆ. ವಿಶ್ವದ ಅತ್ಯಂತ ಪ್ರಾಚೀನ ನಗರವಾಗಿರುವ ಕಾಶಿ ಇಡೀ ಜಗತ್ತನ್ನೇ ಆಕರ್ಷಿಸುತ್ತಿರುವ ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಇತಿಹಾಸದ ಸಂಗಮವಾಗಿದೆ ಎಂದು ಅವರು ಹೇಳಿದ್ದಾರೆ.
‘ನಿಮ್ಮ ಉದ್ಯಮ ಸಹವರ್ತಿಗಳಿಗೆ ಲಾಭ ಮಾಡಿಕೊಡುವುದೇ ಇವೆಲ್ಲದರ ಹಿಂದಿನ ಉದ್ದೇಶವೇ? ನೀವು ನೀರು, ಅರಣ್ಯಗಳು ಮತ್ತು ಪರ್ವತಗಳನ್ನು ಅವರಿಗೆ ಒಪ್ಪಿಸಿದ್ದೀರಿ. ಈಗ ನಮ್ಮ ಸಾಂಸ್ಕೃತಿಕ ಪರಂಪರೆಯ ಸರದಿ ಬಂದಿದೆ’ ಎಂದು ಖರ್ಗೆ ಹೇಳಿದ್ದಾರೆ.
‘ಪರಂಪರೆಯನ್ನು ರಕ್ಷಿಸಿಕೊಂಡೇ ನವೀಕರಣ, ಸ್ವಚ್ಛತೆ ಮತ್ತು ಸುಂದರೀಕರಣ ಸಾಧ್ಯವಿಲ್ಲವೇ ಎಂಬುದು ಈ ದೇಶದ ಜನರ ಪ್ರಶ್ನೆಯಾಗಿದೆ. ನಿಮ್ಮ ಸರ್ಕಾರವು ಯಾರೊಂದಿಗೂ ಸಮಾಲೋಚಿಸದೆ ಮಹಾತ್ಮಾ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ಭಾರತೀಯ ವ್ಯಕ್ತಿಗಳ ಪ್ರತಿಮೆಗಳನ್ನು ಸಂಸತ್ ಸಂಕೀರ್ಣದಿಂದ ತೆಗೆದು ಒಂದು ಮೂಲೆಯಲ್ಲಿ ಇರಿಸಿದ್ದನ್ನು ಇಡೀ ದೇಶ ಮರೆತಿಲ್ಲ. ಜಲಿಯನ್ ವಾಲಾ ಬಾಗ್ ನಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಇದೇ ನವೀಕರಣದ ಹೆಸರಿನಲ್ಲಿ ಗೋಡೆಗಳಿಂದ ಅಳಿಸಿಹಾಕಲಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಬುಲ್ಡೋಜರ್ ಗಳಿಗೆ ಬಲಿಯಾದ ಮಣಿಕರ್ಣಿಕಾ ಘಾಟ್ ನಲ್ಲಿನ ಶತಮಾನಗಳಷ್ಟು ಹಳೆಯ ಪ್ರತಿಮೆಗಳನ್ನೇಕೆ ನಾಶಗೊಳಿಸಲಾಗಿದೆ? ಅವುಗಳನ್ನು ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಬಹುದಿತ್ತಲ್ಲವೇ? ‘ಗಂಗಾಮಾತೆ ನನ್ನನ್ನು ಕರೆದಿದ್ದಾಳೆ’ ಎಂದು ನೀವು ಹೇಳಿಕೊಂಡಿದ್ದೀರಿ. ಇಂದು ನೀವು ಗಂಗಾಮಾತೆಯನ್ನೇ ಮರೆತಿದ್ದೀರಿ. ವಾರಣಾಸಿಯ ಘಾಟ್‌ಗಳು ಈ ನಗರದ ಗುರುತು. ಈ ಘಾಟ್‌ಗಳನ್ನು ಜನರು ಪ್ರವೇಶಿಸದಂತೆ ಮಾಡಲು ನೀವು ಬಯಸಿದ್ದೀರಾ?’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಪ್ರತಿವರ್ಷ ಲಕ್ಷಾಂತರ ಜನರು ಮೋಕ್ಷವನ್ನು ಪಡೆಯಲು ತಮ್ಮ ಜೀವನದ ಕೊನೆಯ ಹಂತಗಳಲ್ಲಿ ಕಾಶಿಗೆ ಬರುತ್ತಾರೆ. ಈ ಭಕ್ತರ ನಂಬಿಕೆಗಳಿಗೆ ದ್ರೋಹವೆಸಗುವುದೇ ನಿಮ್ಮ ಉದ್ದೇಶವೇ? ಎಂದು ಖರ್ಗೆ ಮೋದಿಯವರನ್ನು ಕುಟುಕಿದ್ದಾರೆ.