ಏರ್ ಇಂಡಿಯಾ ವಿಮಾನ ದುರಂತ ನಡೆದು 14 ದಿನ ಕಳೆದರೂ ಇನ್ನೂ ಆಘಾತದಿಂದ ಹೊರ ಬರದ ಸ್ಥಳೀಯರು!
ಅವರು ನಿಂತಿದ್ದ ನೆಲ ಇದ್ದಕ್ಕಿದ್ದಂತೆ ನಡುಗಿತು, ಮನೆಗಳೂ ಕೂಡ ನಡುಗಿದವು, ಮನೆಯ ಕಿಟಕಿಗಳು, ಬಾಗಿಲುಗಳು ಹಠಾತ್ ತೆರೆದವು. ಈ ನೆನಪು ಇನ್ನೂ ಕಣ್ಮುಂದಿದೆ. ಏರ್ ಇಂಡಿಯಾ ವಿಮಾನ ಪತನಗೊಂಡು 14 ದಿನಗಳು ಕಳೆದರೂ ಮೇಘನಿನಗರದಲ್ಲಿನ ಜನರು ಇನ್ನೂ ಆಘಾತದಿಂದ ಹೊರಬಂದಿಲ್ಲ.
ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ʼAI-171ʼ ಜೂನ್ 12ರಂದು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಪತನಗೊಂಡಿತು. ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ ಅಪ್ಪಳಿಸಿತ್ತು. ಓರ್ವ ಪ್ರಯಾಣಿಕನನ್ನು ಹೊರತು ಪಡಿಸಿ 242 ಪ್ರಯಾಣಿಕರು, ಸಿಬ್ಬಂದಿಗಳು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 270 ಮಂದಿ ಮೃತಪಟ್ಟಿದ್ದಾರೆ.
ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಬದಲಾದ ಸ್ಥಳೀಯ ಜನರ ಜೀವನ!
ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಮೇಘನಿನಗರದಲ್ಲಿರುವ ಗುಜರಾತ್ ಹೌಸಿಂಗ್ ಬೋರ್ಡ್ ನಿವಾಸಿಗಳ ಜೀವನ ಬದಲಾಗಿದೆ. ಅಲ್ಲಿನ ನಿವಾಸಿಗಳು ಭಯದಿಂದ ದಿನದೂಡುತ್ತಿದ್ದಾರೆ. ಪ್ರತಿದಿನ ನೂರಾರು ವಿಮಾನಗಳು ಅಹ್ಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತದೆ. ಅಲ್ಲಿಂದ ವಾಪಾಸ್ಸು ಹಾರಾಟ ಮಾಡುತ್ತದೆ. ಪ್ರತಿ ಐದು ನಿಮಿಷಗಳಿಗೊಂದು ವಿಮಾನಗಳ ಹಾರಾಟ ನಡೆಯುತ್ತದೆ.
ವಿಮಾನಗಳ ಶಬ್ದ ಮತ್ತು ಹಾರಾಟದ ದೃಶ್ಯ ಅಲ್ಲಿನ ನಿವಾಸಿಗಳ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ, ದುರಂತ ನಡೆದ ದಿನ ಏರ್ ಇಂಡಿಯಾ ವಿಮಾನ ಕೆಳಗಡೆಯಿಂದ ಹಾರಾಟ ನಡೆಸುತ್ತಿತ್ತು. ಅಸಾಮಾನ್ಯವಾದ ಶಬ್ಧ ಕೇಳಿ ಬಂದಿತ್ತು. ವಿಮಾನ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಸಂಕೀರ್ಣದೊಳಗಿನ ಎತ್ತರದ ಮರಕ್ಕೆ ಢಿಕ್ಕಿ ಹೊಡೆದು ನಂತರ ಕಟ್ಟಡದ ಮೇಲೆ ಅಪ್ಪಳಿಸಿತ್ತು.
ಸ್ಥಳೀಯರು ಹೇಳುವುದೇನು?
ʼನಮಗೆ ಭಯವಾಗಿದೆ. ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಬೇಕು, ಇಲ್ಲದಿದ್ದರೆ ವಿಮಾನಗಳನ್ನು ಬದಲಿ ಮಾರ್ಗದಲ್ಲಿ ಹಾರಾಟಕ್ಕೆ ವ್ಯವಸ್ಥೆ ಮಾಡಬೇಕುʼ ಎಂದು ಕಿಶನ್‌ಬಾಯ್ ಮತ್ತು ಅವರ ಪತ್ನಿ ಮಣಿಬೆನ್ ಹೇಳಿದರು. ವಿಮಾನ ದುರಂತದ ವೇಳೆ ಕಿಶನ್‌ಬಾಯ್ ಗಾಯಗೊಂಡಿದ್ದರು.
ಹೌಸಿಂಗ್ ಸೊಸೈಟಿಯ ಮೂರನೇ ಮಹಡಿಯಲ್ಲಿ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುವ ಸೋನಾಲ್ಬೆನ್, "ನಾನು ರೊಟ್ಟಿ ತಯಾರಿಸುತ್ತಿದ್ದಾಗ ನನ್ನ ಕೋಣೆ ಅಲುಗಾಡುವ ಜೊತೆಗೆ ದೊಡ್ಡ ಶಬ್ದ ಕೇಳಿಸಿತು. ನೆಲ ತುಂಬಾ ಬಿಸಿಯಾಯಿತು. ನಾನು ನನ್ನ ಮಗನ ಜೊತೆಗೆ ಹೊರಗೆ ಓಡಿ ಬಂದೆ, ನನ್ನ ಪತಿ ಮತ್ತು ಇನ್ನೋರ್ವ ಮಗ ಹೊರಗಿದ್ದರು. ಅಂದಿನಿಂದ, ನನಗೆ ನಿದ್ರೆ ಬರುತ್ತಿಲ್ಲ. ಪ್ರತಿ ಬಾರಿ ವಿಮಾನ ಹಾದುಹೋದಾಗಲೂ ನಾನು ಭಯದಿಂದ ನಡುಗುತ್ತೇನೆʼ ಎಂದು ಹೇಳಿದ್ದಾರೆ.
ಪಕ್ಕದ ಮತ್ತೊಂದು ಕಟ್ಟಡದಲ್ಲಿ ವಾಸಿಸುವ ಮೆಟ್ರೋ ರೈಲು ಉದ್ಯೋಗಿ ಬೀರೇಂದ್ರ ತ್ರಿವೇದಿ ಅನುಭವ ಹಂಚಿಕೊಳ್ಳುತ್ತಾ, ʼನಮ್ಮ ಕಟ್ಟಡದಲ್ಲಿ 40ಕ್ಕೂ ಹೆಚ್ಚು ಮಕ್ಕಳಿದ್ದಾರೆ. ವಿಮಾನ ದುರಂತದ ಬಳಿಕ ಅವರಲ್ಲಿ ಹೆಚ್ಚಿನವರು ವಿಮಾನಗಳ ಶಬ್ದ ಕೇಳಿದ ನಂತರ ರಾತ್ರಿಯಲ್ಲಿ ಅಳಲು ಪ್ರಾರಂಭಿಸುತ್ತಾರೆʼ ಎಂದು ಹೇಳಿದರು.
"ಕಾರ್ಗೋ ವಿಮಾನಗಳು ಹೆಚ್ಚು ಶಬ್ದ ಮಾಡುತ್ತವೆ" ಎಂದು ದಿನಸಿ ಅಂಗಡಿಯನ್ನು ನಡೆಸುತ್ತಿರುವ ಮತ್ತು 1961ರಿಂದ ಇದೇ ಪ್ರದೇಶದಲ್ಲಿ ವಾಸಿಸುತ್ತಿರುವ ವಿಕ್ರಮ್ ಸಿಂಗ್ ಪರ್ಮಾರ್ ಹೇಳಿದ್ದಾರೆ. "ಇದು ಅಪಘಾತ. ಇದು ಪ್ರತಿದಿನ ಸಂಭವಿಸುವುದಿಲ್ಲ" ಎಂದು ಹೇಳಿದರು.
ವೈದ್ಯರು ಹೇಳುವುದೇನು?
ವಿಮಾನ ನಿಲ್ದಾಣಗಳ ಬಳಿ ವಾಸಿಸುವ ನಿವಾಸಿಗಳು ಅನುಭವಿಸುವ ಮಾನಸಿಕ ಯಾತನೆಯನ್ನು ತ್ವರಿತವಾಗಿ ಸರಿಪಡಿಸುವುದು ಕಷ್ಟ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.
ಸೈರನ್‌ಗಳು, ಅವಶೇಷಗಳು ಮತ್ತು ವಿಮಾನಗಳ ಶಬ್ದದ ಪರಿಣಾಮಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದು ತೀವ್ರವಾದ ಒತ್ತಡವನ್ನುಂಟುಮಾಡಬಹುದು. ಮಕ್ಕಳು ದುಃಸ್ವಪ್ನಗಳು, ಭಯ ಅಥವಾ ನಿದ್ರೆಯಲ್ಲಿ ತೊಂದರೆಯನ್ನು ಅನುಭವಿಸಬಹುದು ಎಂದು ಅಹ್ಮದಾಬಾದ್‌ನ ವಿಮ್ಸ್ ಆಸ್ಪತ್ರೆಯ ಮನೋವೈದ್ಯ ಡಾ. ಧ್ರುವ್ ರಾವಲ್ ಹೇಳಿದರು.