×
Ad

ನ್ಯಾ. ಯಶವಂತ್ ವರ್ಮಾ ವಿರುದ್ಧ ವಾಗ್ದಂಡನೆ | ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರಕಾರ ಮುಂದು: ರಿಜಿಜು

Update: 2025-06-04 21:27 IST

ಸಚಿವ ಕಿರಣ್ ರಿಜಿಜು | PC : PTI 

ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಯಶವಂತ ವರ್ಮಾ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಸಂಸತ್‌ ನಲ್ಲಿ ಮಂಡಿಸುವಾಗ ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಹೇಳಿದ್ದಾರೆ. ನ್ಯಾಯಾಂಗದ ಭ್ರಷ್ಟಾಚಾರವನ್ನು ‘‘ರಾಜಕೀಯ ದೃಷ್ಟಿಕೋನ’’ದಿಂದ ನೋಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಭ್ರಷ್ಟಾಚಾರ ವಿವಾದದಲ್ಲಿ ಸಿಲುಕಿಕೊಂಡಿರುವ ಹಾಗೂ ಸುಪ್ರೀಂ ಕೋರ್ಟ್ ನೇಮಿತ ಸಮಿತಿಯಿಂದ ದೋಷಾರೋಪಕ್ಕೆ ಒಳಗಾಗಿರುವ ನ್ಯಾ. ವರ್ಮಾ ವಿರುದ್ಧ ವಾಗ್ದಂಡನೆ ವಿಧಿಸುವ ಪ್ರಕ್ರಿಯೆಯನ್ನು ‘‘ಸಹಯೋಗ’’ದಿಂದ ನಡೆಸಲು ಸರಕಾರ ಬಯಸಿದೆ ಎಂದು ಅವರು ನುಡಿದರು.

ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ನಿರ್ಣಯವೊಂದನ್ನು ಮಂಡಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ತಾನು ಈಗಾಗಲೇ ಮಾತುಕತೆ ಆರಂಭಿಸಿದ್ದೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು ನುಡಿದರು. ಸಂಸತ್‌ನ ಮುಂಗಾರು ಅಧಿವೇಶನ ಜುಲೈ 21ರಂದು ಆರಂಭಗೊಳ್ಳಲಿದೆ.

ನ್ಯಾ. ವರ್ಮಾರನ್ನು ವಜಾಗೊಳಿಸಲು ಎಲ್ಲಾ ಪಕ್ಷಗಳು ‘‘ಸಂಯುಕ್ತವಾಗಿ’’ ನಿರ್ಣಯವನ್ನು ಮಂಡಿಸಬೇಕು ಎಂಬುದಾಗಿ ಸರಕಾರ ಬಯಸುತ್ತದೆ ಎಂದರು.

ನ್ಯಾ. ವರ್ಮಾ ದಿಲ್ಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದಾಗ ದಿಲ್ಲಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಮಾರ್ಚ್ ತಿಂಗಳಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಬೆಂಕಿ ಆರಿಸಲು ಹೋಗಿದ್ದ ಅಗ್ನಿಶಾಮಕ ಸಿಬ್ಬಂದಿ ಮನೆಯ ಕೋಣೆಯೊಂದರಲ್ಲಿ ಇರಿಸಲಾಗಿದ್ದ ಅಗಾಧ ಪ್ರಮಾಣದ ಕರೆನ್ಸಿ ನೋಟುಗಳನ್ನು ನೋಡಿದ್ದರು.

ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್, ನ್ಯಾಯಾಧೀಶರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ಹಲವಾರು ಸಾಕ್ಷಿಗಳೊಂದಿಗೆ ಮಾತನಾಡಿದ ಬಳಿಕ ಮತ್ತು ನ್ಯಾ. ವರ್ಮಾರ ಹೇಳಿಕೆಯನ್ನು ದಾಖಲಿಸಿದ ಬಳಿಕ ವಿವಾದಿತ ನ್ಯಾಯಾಧೀಶರಿಗೆ ಛೀಮಾರಿ ಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News