ಜೈಪುರದಲ್ಲಿಳಿದ ರಿಯಾದ್-ದಿಲ್ಲಿ ಏರ್ ಇಂಡಿಯಾ ವಿಮಾನ; ಬಸ್‌ನಲ್ಲಿ ದಿಲ್ಲಿಗೆ ಪ್ರಯಾಣಿಕರ ರವಾನೆ
ಏರ್ ಇಂಡಿಯಾ ವಿಮಾನ | PC : PTI
ಜೈಪುರ: ಏರ್ ಇಂಡಿಯಾದ ಸಂಕಷ್ಟಗಳ ಸರಮಾಲೆ ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ರವಿವಾರ ತಡರಾತ್ರಿ ರಿಯಾದ್ ನಿಂದ ದಿಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಅನಿರೀಕ್ಷಿತವಾಗಿ ಜೈಪುರದಲ್ಲಿ ಇಳಿಸಲಾಗಿದ್ದು, ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ಸಿಗದಿದ್ದುದು ಇದಕ್ಕೆ ಕಾರಣವೆನ್ನಲಾಗಿದೆ. ತನ್ನ ಕರ್ತವ್ಯದ ಅವಧಿ ಮುಗಿದಿದೆ ಎಂದು ಹೇಳಿ ಪೈಲಟ್ ಪ್ರಯಾಣವನ್ನು ಮುಂದುವರಿಸಲು ನಿರಾಕರಿಸಿದಾಗ ಪರಿಸ್ಥಿತಿಯು ನಾಟಕೀಯ ತಿರುವನ್ನು ಪಡೆದುಕೊಂಡಿತ್ತು. ಇದರಿಂದಾಗಿ ಪ್ರಯಾಣಿಕರು ಸುಮಾರು ಮೂರು ಗಂಟೆಗಳ ಕಾಲ ವಿಮಾನದೊಳಗೇ ಕಳೆಯುವಂತಾಗಿತ್ತು.
ಏರ್ ಇಂಡಿಯಾ ವಿಮಾನವು ಸೋಮವಾರ ನಸುಕಿನ 12:55ಕ್ಕೆ ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಟರ್ಮಿನಲ್-1 ಕೋಲಾಹಲಕ್ಕೆ ಸಾಕ್ಷಿಯಾಗಿತ್ತು. ತನ್ನ ಅನುಮತಿಸಲಾದ ಹಾರಾಟ ಅವಧಿಯು ಮುಗಿದಿದೆ ಎಂದು ಹೇಳಿ ಪೈಲಟ್ ನಿರ್ಗಮಿಸಿದ ಬಳಿಕ ಪರ್ಯಾಯ ಪೈಲಟ್ ಲಭ್ಯವಾಗದೆ ಏರ್ ಇಂಡಿಯಾ ಪ್ರಯಾಣಿಕರನ್ನು ದಿಲ್ಲಿಗೆ ರವಾನಿಸಲು ಬಸ್ ವ್ಯವಸ್ಥೆಯನ್ನು ಮಾಡಿತ್ತು.
ಇದು ಪ್ರಯಾಣಿಕರಲ್ಲಿ ಆಕ್ರೋಶ ಸೃಷ್ಟಿಸಿತ್ತು. ಅನೇಕ ಪ್ರಯಾಣಿಕರು ಏರ್ ಇಂಡಿಯಾ ಸಿಬ್ಬಂದಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಆರಂಭಿಸಿದ್ದರು. ರಸ್ತೆ ಮೂಲಕ ಪ್ರಯಾಣಿಸಲು ಉದ್ರಿಕ್ತ ಪ್ರಯಾಣಿಕರ ಮನವೊಲಿಸಲು ಸಂಸ್ಥೆಯು ಹರಸಾಹಸವನ್ನೇ ಮಾಡಬೇಕಾಯಿತು. ವಿಳಂಬದಿಂದಾಗಿ ಹಲವಾರು ಪ್ರಯಾಣಿಕರು ತಮ್ಮ ಮುಂದಿನ ಪ್ರಯಾಣದ ವಿಮಾನಗಳನ್ನು ತಪ್ಪಿಸಿಕೊಂಡಿದ್ದು, ಇದು ಅವರ ಹತಾಶೆಯನ್ನು ಇನ್ನಷ್ಟು ಹೆಚ್ಚಿಸಿತ್ತು.
‘ವಿಮಾನದಲ್ಲಿದ್ದ ಸಿಬ್ಬಂದಿಗಳ ವರ್ತನೆ ಅತ್ಯಂತ ಕೆಟ್ಟದಾಗಿತ್ತು, ರಾತ್ರಿಯಿಡೀ ನಮಗೆ ಆಹಾರವನ್ನೂ ನೀಡಲಿಲ್ಲ. ಇಂತಹ ವರ್ತನೆ ಏರ್ ಇಂಡಿಯಾವನ್ನು ಅತ್ಯಂತ ಕಳಪೆಯಾಗಿ ಬಿಂಬಿಸುತ್ತದೆ. ಭವಿಷ್ಯದಲ್ಲಿ ಏರ್ ಇಂಡಿಯಾವನ್ನು ಬಹಿಷ್ಕರಿಸಲು ನಮ್ಮಲ್ಲಿ ಹಲವರು ಯೋಚಿಸುತ್ತಿದ್ದೇವೆ’ ಎಂದು ಪೀಡಿತ ಪ್ರಯಾಣಿಕರೋರ್ವರು ಹೇಳಿದರು.
‘ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ನಾವು ತೀವ್ರವಾಗಿ ವಿಷಾದಿಸುತ್ತೇವೆ. ದಿಲ್ಲಿಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ವಿಮಾನವನ್ನು ಜೈಪುರಕ್ಕೆ ತಿರುಗಿಸುವಂತಾಗಿತ್ತು. ಇದು ನಮ್ಮ ನಿಯಂತ್ರಣವನ್ನು ಮೀರಿತ್ತು. ನಮ್ಮ ತಂಡವು ಎಲ್ಲ ಪ್ರಯಾಣಿಕರಿಗೆ ಅಗತ್ಯ ನೆರವು ಒದಗಿಸಿದ್ದು, ಪರ್ಯಾಯ ಸಾರಿಗೆಯನ್ನು ವ್ಯವಸ್ಥೆ ಮಾಡಿದೆ ’ ಎಂದು ಏರ್ ಇಂಡಿಯಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.