ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿ ಎಂದು ರಸ್ತೆಬದಿಯ ಮರಗಳನ್ನು ಕಡಿಯುವಂತಿಲ್ಲ!

Update: 2024-05-25 15:54 GMT

 ಕೇರಳ ಹೈಕೋರ್ಟ್ | PC : PTI 

ಕೊಚ್ಚಿ : ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂಬ ಮಾತ್ರಕ್ಕೆ ರಸ್ತೆ ಬದಿಯ ಮರಗಳನ್ನು ಕಡಿಯದಂತೆ ನೋಡಿಕೊಳ್ಳುವಂತೆ ಕೇರಳ ಉಚ್ಛ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಮರಗಳಿಗೆ ಹಾನಿಯಾಗಿದ್ದರೆ ಮತ್ತು ಅವು ಸಾರ್ವಜನಿಕ ಅಪಾಯವನ್ನುಂಟು ಮಾಡುವಂತಿದ್ದರೆ ಮಾತ್ರ ಅವುಗಳನ್ನು ಕಡಿಯಬೇಕು ಎಂದು ಉಚ್ಛ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಸರಕಾರಿ ಜಾಗಗಳಲ್ಲಿ ಬೆಳೆದಿರುವ ಮರಗಳ ಕಡಿತ ಮತ್ತು ವಿಲೇವಾರಿಯನ್ನು ನಿಯಂತ್ರಿಸಿರುವ 2010ರ ಸರಕಾರಿ ಆದೇಶಕ್ಕೆ ಅನುಗುಣವಾಗಿ ರಚಿಸಲಾಗಿರುವ ಸಮಿತಿಯು ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಸಮಿತಿಯು ನಿರ್ಧರಿಸದೆ ಯಾವುದೇ ಪ್ರಾಧಿಕಾರಗಳು ರಾಜ್ಯದಲ್ಲಿಯ ರಸ್ತೆಬದಿಗಳ ಮರವನ್ನು ಕಡಿಯುವಂತಿಲ್ಲ ಮತ್ತು ವಿಲೇವಾರಿ ಮಾಡುವಂತಿಲ್ಲ. ಈ ಸಂಬಂಧ ರಾಜ್ಯದ ಮುಖ್ಯಕಾರ್ಯದರ್ಶಿಗಳು ಅಗತ್ಯ ಆದೇಶವನ್ನು ಹೊರಡಿಸಬೇಕು ಎಂದು ಹೇಳಿದ ನ್ಯಾ.ಪಿ.ವಿ.ಕುಂಞಿಕೃಷ್ಣನ್, ರಸ್ತೆಬದಿಗಳಲ್ಲಿಯ ಮರಗಳನ್ನು ಕಡಿಯಲು ಮನವಿಗಳಿಗೆ ಸಾಕಷ್ಟು ಕಾರಣಗಳಿಲ್ಲದೆ ಅನುಮತಿ ದೊರಕದಂತೆ ಕೇರಳ ಸರಕಾರವು ನೋಡಿಕೊಳ್ಳಬೇಕು. ಮರಗಳು ತಂಪು ನೆರಳನ್ನು ನೀಡುತ್ತವೆ, ಶುದ್ಧ ಆಕ್ಸಿಜನ್ ಮತ್ತು ಪಶುಪಕ್ಷಿಗಳಿಗೆ ಆಶ್ರಯವನ್ನು ಒದಗಿಸುತ್ತವೆ ಎಂದರು.

ಪಾಲಕ್ಕಾಡ್-ಪೊನ್ನಾನಿ ರಸ್ತೆಗೆ ಹೊಂದಿಕೊಂಡಿರುವ ವಾಣಿಜ್ಯ ಕಟ್ಟಡದ ನೋಟಕ್ಕೆ ಅಡ್ಡಿಯಾಗುತ್ತಿರುವ ಮರಗಳನ್ನು ಕಡಿಯಲು ಅನುಮತಿಯನ್ನು ನಿರಾಕರಿಸಿದ್ದ ಅರಣ್ಯ ಇಲಾಖೆಯ ನಿರ್ಧಾರವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಉಚ್ಛ ನ್ಯಾಯಾಲಯವು ವಜಾಗೊಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News