ದೇವಸ್ಥಾನದಲ್ಲಿ ದೀಪ ಬೆಳಗುವ ವಿಚಾರಕ್ಕೆ ಸಂಬಂಧಿಸಿದ ವಿವಾದ : ತಮಿಳುನಾಡು ಸರಕಾರ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
Update: 2025-12-05 12:47 IST
Photo credit: PTI
ಹೊಸದಿಲ್ಲಿ: ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾ ಸಮೀಪ ಇರುವ ಕಲ್ಲಿನ ದೀಪಸ್ತಂಭವಾದ 'ದೀಪಥೂನ್' ನಲ್ಲಿ 'ಕಾರ್ತಿಗೈ ದೀಪ' ಬೆಳಗಲು ಅರುಲ್ಮಿಘು ಸುಬ್ರಮಣಿಯ ಸ್ವಾಮಿ ದೇವಸ್ಥಾನದ ಭಕ್ತರಿಗೆ ಅನುಮತಿ ನೀಡುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ.
ರಾಜ್ಯ ಸರಕಾರದ ಪರ ವಕೀಲರೊಬ್ಬರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸ್ವೀಕರಿಸಿದೆ. ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದೆ.
ಈ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ, ಪ್ರತಿವಾದಿಗಳ ಪರ ವಕೀಲರು ಸರಕಾರವು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಲಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಲು ಅನಗತ್ಯ ನಾಟಕ ಸೃಷ್ಟಿಸುತ್ತಿದೆ ಎಂದು ಹೇಳಿದರು.