ನಾಲ್ವರನ್ನು ಕೊಂದಿದ್ದ RPF ಕಾನ್ಸ್ಟೇಬಲ್ ಮಾನಸಿಕವಾಗಿ ಸ್ವಸ್ಥನಾಗಿದ್ದ, ತನ್ನ ಕೃತ್ಯದ ಪರಿಣಾಮದ ಬಗ್ಗೆ ಸಂಪೂರ್ಣ ಅರಿವಿತ್ತು: ದೋಷಾರೋಪ ಪಟ್ಟಿ
ಆರೋಪಿ ಚೇತನ್ ಸಿಂಗ್ (Twitter)
ಮುಂಬೈ: ಜುಲೈ 31ರಂದು ಜೈಪುರ-ಮುಂಬೈ ಸೆಂಟ್ರಲ್ ರೈಲಿನಲ್ಲಿ ತನ್ನ ಮೇಲಧಿಕಾರಿ ಮತ್ತು ಮೂವರು ಮುಸ್ಲಿಮ್ ಪ್ರಯಾಣಿಕರನ್ನು ಗುಂಡಿಟ್ಟು ಹತ್ಯೆಗೈದಿದ್ದ ರೈಲ್ವೆ ರಕ್ಷಣಾ ಪಡೆ (RPF )ಯ ಕಾನ್ಸ್ಟೇಬಲ್ ಚೇತನ್ ಸಿಂಗ್ ಚೌಧರಿ(33) ಮಾನಸಿಕವಾಗಿ ಸ್ವಸ್ಥನಾಗಿದ್ದಾನೆ ಎಂದು ಸರಕಾರಿ ರೈಲ್ವೆ ಪೋಲಿಸ್ (ಜಿಪಿಎಫ್) ಇಲ್ಲಿಯ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ. ಚೌಧರಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬ ಸ್ಥಳೀಯ ಬಿಜೆಪಿ ನಾಯಕರು ಮತ್ತು ಪೊಲೀಸರ ಹೇಳಿಕೆಗೆ ಇದು ತದ್ವಿರುದ್ಧವಾಗಿದೆ ಎಂದು wire.in ವರದಿ ಮಾಡಿದೆ.
ಚೌಧರಿಗೆ ತಾನು ನಡೆಸಲಿದ್ದ ಕೃತ್ಯದ ಪರಿಣಾಮದ ಬಗ್ಗೆ ಸಂಪೂರ್ಣ ಅರಿವಿತ್ತು, ಆದಾಗ್ಯೂ ಆತ ಬಂದೂಕಿನ ಟ್ರಿಗರ್ ಒತ್ತಿದ್ದ ಮತ್ತು ಜನರನ್ನು ಕೊಂದಿದ್ದ ಎಂದು ಹಿರಿಯ ಜಿಆರ್ಪಿ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಜಿಪಿಎಫ್ 150 ಸಾಕ್ಷಿಗಳ ಹೇಳಿಕೆಗಳ ಆಧಾರದಲ್ಲಿ ಈ ತೀರ್ಮಾನಕ್ಕೆ ಬಂದಿದೆ.
ಆಘಾತಕಾರಿ ಘಟನೆಯನ್ನು ಸಹಪ್ರಯಾಣಿಕರು ಭಾಗಶಃ ವೀಡಿಯೊದಲ್ಲಿ ಸೆರೆಹಿಡಿದಿದ್ದು, ಅದು ಚೌಧರಿ ಹೇಗೆ ಒಂಭತ್ತು ಬೋಗಿಗಳಲ್ಲಿದ್ದ ಮೂವರು ಪ್ರಯಾಣಿಕರನ್ನು ಕೊಂದಿದ್ದ ಎನ್ನುವುದನ್ನು ತೋರಿಸಿದೆ. ಅಬ್ದುಲ್ ಖಾದರ್ ಮುಹಮ್ಮದ್ ಹುಸೇನ್ ಭಾನಪುರವಾಲೆ, ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಚೌಧರಿ ಅಂದು ರಾತ್ರಿ ತನಗೆ ರಜೆ ನೀಡಲು ನಿರಾಕರಿಸಿದ್ದಕ್ಕಾಗಿ ತನ್ನ ಮೇಲಧಿಕಾರಿ ಎಎಸ್ಐ ಟಿಕಾರಾಮ ಮೀನಾ ಅವರನ್ನು ಹತ್ಯೆಗೈದಿದ್ದ ಎನ್ನುವುದನ್ನು ತನಿಖೆಯು ತೋರಿಸಿದೆ.
ಮೀನಾರನ್ನು ಸಿಟ್ಟಿನಿಂದ ಕೊಂದಿರಬಹುದು, ಆದರೆ ಉಳಿದ ಮೂವರನ್ನು ಆಯ್ದುಕೊಂಡು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಮೀನಾ ಮತ್ತು ಚೌಧರಿ ರೈಲಿನಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದರು ಮತ್ತು ಅವರ ನಡುವೆ ವಾಗ್ವಾದದ ಬಳಿಕ ಗುಂಡು ಹಾರಾಟ ಘಟನೆ ನಡೆದಿತ್ತು.
ಚೌಧರಿ ಬುರ್ಖಾ ಧರಿಸಿದ್ದ ಓರ್ವ ಮಹಿಳೆಗೆ ಬಂದೂಕು ಗುರಿಯಿಟ್ಟು ‘ಜೈ ಮಾತಾ ದಿ’ ಎಂದು ಹೇಳುವಂತೆ ಬಲವಂತಗೊಳಿಸಿದ್ದ ಎಂದು ಸಾಕ್ಷಿಯಾಗಿರುವ ಓರ್ವ ಪ್ರಯಾಣಿಕರು ತಿಳಿಸಿದ್ದಾರೆ.
ಪೊಲೀಸರು ಈಗ ನಿರ್ಣಾಯಕ ಸಾಕ್ಷ್ಯವನ್ನಾಗಿ ಬಳಸಿರುವ ವೀಡಿಯೊದಲ್ಲಿ ಚೌಧರಿ ಅಸ್ಗರ್ ಅವರ ರಕ್ತಸಿಕ್ತ ದೇಹದ ಮೇಲೆ ನಿಂತಿಕೊಂಡು ಪ್ರಯಾಣಿಕರೊಂದಿಗೆ ಮಾತನಾಡುತ್ತಿರುವುದು ಕಂಡು ಬಂದಿದೆ. ಇವರೆಲ್ಲ ಪಾಕಿಸ್ತಾನದ ಎಜೆಂಟರಾಗಿದ್ದಾರೆ ಎಂದು ದೂರಿದ ಆತ, ನೀವು ಭಾರತದಲ್ಲಿರಲು ಬಯಸಿದ್ದರೆ ಮೋದಿ,ಯೋಗಿ ಮತ್ತು ಠಾಕ್ರೆಗೆ ಮತ ಹಾಕಿ ಎಂದು ಹೇಳಿದ್ದು ವೀಡಿಯೊದಲ್ಲಿ ಸ್ಪಷ್ಟವಾಗಿ ಕೇಳುತ್ತಿದೆ.
ಚೌಧರಿಯನ್ನು ನ್ಯಾಯಾಲಯಕ್ಕೆ ಕರೆತರುವುದು ಆತನಿಗೆ ಸುರಕ್ಷಿತವಾಗದಿರಬಹುದು, ಹೀಗಾಗಿ ಆತನನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರು ಪಡಿಸಲಾಗಿದೆ ಎಂದು ಬೋರಿವಲಿ ಮಹಾನಗರ ನ್ಯಾಯಾಲಯದ ಮುಂದೆ ದೋಷಾರೋಪ ಪಟ್ಟಿ ಸಲ್ಲಿಕೆಗೆ ಮುನ್ನ ಜಿಪಿಎಫ್ ತಿಳಿಸಿತ್ತು.
ಆರಂಭದಲ್ಲಿ ರೈಲ್ವೆ ಪೊಲೀಸರು ಚೌಧರಿ ಮಾನಸಿಕ ಅಸ್ವಸ್ಥ ಎಂದೇ ಹೇಳಿಕೊಂಡು ಬಂದಿದ್ದರು. ಅದರೆ ಟೀಕೆಗಳ ಬಳಿಕ ಅಂತಿಮವಾಗಿ ಆತ ಮಾನಸಿಕವಾಗಿ ಸ್ವಸ್ಥ ವ್ಯಕ್ತಿಯಾಗಿದ್ದಾನೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಆತ ಘೋರ ಕೃತ್ಯವನ್ನು ಎಸಗಿದ್ದಾನೆ ಎಂದು ಅವರು ಬಣ್ಣಿಸಿದ್ದಾರೆ.
ನ.2ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.