×
Ad

ಉತ್ತರ ಪ್ರದೇಶ| ಹಸು ಮೇಯಿಸುವ ವಿಚಾರಕ್ಕೆ ಜಗಳ: ಆರೆಸ್ಸೆಸ್ ಪದಾಧಿಕಾರಿ ಪುತ್ರನ ಹತ್ಯೆ

ಮೂವರು ಆರೋಪಿಗಳ ಸೆರೆ; ಓರ್ವ ಪರಾರಿ

Update: 2025-08-30 15:48 IST

ಸಾಂದರ್ಭಿಕ ಚಿತ್ರ 

ಕುಶಿನಗರ: ಕುಶಿನಗರದ ಗ್ರಾಮವೊಂದರಲ್ಲಿ ಹಸು ಮೇಯಿಸುವ ವಿಚಾರಕ್ಕೆ ನಡೆದ ಜಗಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ‌ (RSS) ಪದಾಧಿಕಾರಿಯ ಪುತ್ರನೊಬ್ಬನನ್ನು ನಾಲ್ವರು ಹತ್ಯೆಗೈದಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಕುಬೇರ್ಸ್ತಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಮ್ರಾ ಹರ್ದೊ ಗ್ರಾಮದಲ್ಲಿ ನಡೆದ ಜಗಳದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಕುಶಿನಗರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ ಅವರು, ನಾನು ಸ್ಥಳದ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಘಟನೆ ಶುಕ್ರವಾರ ಸಂಜೆ ನಡೆದಿದೆ.

ನಿಮ್ಮ ಹೊಲದಲ್ಲಿ ಹಸು ಮೇಯುತ್ತಿದೆ ಎಂದು ಕುಶಿನಗರ ಜಿಲ್ಲೆಯ ಆರೆಸ್ಸೆಸ್ ಪದಾಧಿಕಾರಿಯಾದ ಇಂದ್ರಜಿತ್ ಸಿಂಗ್ ಅವರ ಕಿರಿಯ ಪುತ್ರ ಉತ್ಕರ್ಷ್ ಸಿಂಗ್ (40) ಅವರಿಗೆ ಯಾರೋ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಉತ್ಕರ್ಷ್ ಸಿಂಗ್, ತಮ್ಮ ಹೊಲದಲ್ಲಿ ಹಸು ಮೇಯುತ್ತಿರುವುದನ್ನು ಕಂಡು, ಪಕ್ಕದಲ್ಲೇ ಗುಡಿಸಿಲಿನಲ್ಲಿ ವಾಸಿಸುತ್ತಿರುವ ಕನ್ಹಾಯಿ ಯಾದವ್ ಕುಟುಂಬದ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ವಾಗ್ವಾದದ ಸ್ವರೂಪಕ್ಕೆ ತಿರುಗಿ, ಬಳಿಕ ಘರ್ಷಣೆಯಾಗಿದೆ.

ಕನ್ಹಾಯಿ ಯಾದವ್ ಅವರ ನಾಲ್ವರು ಪುತ್ರರು ತನ್ನ ಪುತ್ರ ಉತ್ಕರ್ಷ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದ್ರಜಿತ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ. ತಮ್ಮ ಜೀವ ಉಳಿಸಿಕೊಳ್ಳಲು ಉತ್ಕರ್ಷ್ ಸಿಂಗ್ ಓಡಿದ್ದು, ಅವರನ್ನು ಕೊಡಲಿ ಹಾಗೂ ದೊಣ್ಣೆಯೊಂದಿಗೆ ಆರೋಪಿಗಳು ಹಿಂಬಾಲಿಸಿದ್ದಾರೆ. ನಂತರ, ಅವರ ತಲೆ, ಮುಖ ಹಾಗೂ ಇನ್ನಿತರ ದೇಹದ ಭಾಗಗಳ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು, ಆತನ ಕಣ್ಣುಗಳನ್ನು ಕಿತ್ತು, ಕಿವಿಗಳನ್ನು ಕತ್ತರಿಸಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ಸಂಬಂಧ ಸಚ್ಚಿದಾನಂದ ಯಾದವ್, ಶ್ರೀ ನಿವಾಸ್ ಯಾದವ್, ದೇವೇಂದ್ರ ಯಾದವ್ ಹಾಗೂ ಗ್ಯಾನ್ ಯಾದವ್ ವಿರುದ್ಧ ಇಂದ್ರಜಿತ್ ಸಿಂಗ್ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ವೃತ್ತಾಧಿಕಾರಿ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News