ಆರೆಸ್ಸೆಸ್ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಬಹು ದೊಡ್ಡ ಎನ್‌ಜಿಒ: ಪ್ರಧಾನಿ ಮೋದಿ ಶ್ಲಾಘನೆ
ಪ್ರಧಾನಿ ನರೇಂದ್ರ ಮೋದಿ (Photo: PTI)
ಭುವನೇಶ್ವರ/ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಬಹು ದೊಡ್ಡ ಸರಕಾರೇತರ ಸಂಸ್ಥೆಯಾಗಿದ್ದು, ಅದು ಈ ವರ್ಷ 100ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿದೆ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು 100 ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಅದು ಯಾವಾಗಲೂ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಸೇವೆಗೆ ಮುಡಿಪಾಗಿದೆ. ಅದು ವಿಶ್ವದ ಬಹು ದೊಡ್ಡ ಸರಕಾರೇತರ ಸಂಸ್ಥೆಯಾಗಿದೆ. ನನಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಇತಿಹಾಸದ ಬಗ್ಗೆ ಹೆಮ್ಮೆಯಿದೆ” ಎಂದು ಹೇಳಿದರು.
ಈ ನಡುವೆ, ಭುವನೇಶ್ವರದಲ್ಲಿನ ಆರೆಸ್ಸೆಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್, ಭಾರತೀಯರು ಸ್ವಾತಂತ್ರ್ಯದಿಂದ ಮಾತ್ರ ತೃಪ್ತರಾಗಬಾರದು. ಅದನ್ನು ಜೀವಂತವಾಗಿಡಲು ಕಠಿಣ ಪರಿಶ್ರಮ ಪಡಬೇಕು ಹಾಗೂ ತ್ಯಾಗಗಳನ್ನು ಮಾಡಬೇಕು” ಎಂದು ಕರೆ ನೀಡಿದರು.
“ನಮ್ಮ ಪೂರ್ವಜರು ಭಾರಿ ತ್ಯಾಗಗಳನ್ನು ಮಾಡುವ ಮೂಲಕ ಭಾರತದ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಅದನ್ನು ಜೀವಂತವಾಗಿಡಲು ಹಾಗೂ ಸ್ವಾವಲಂಬಿ ಮತ್ತು ಸಂಘರ್ಷ ನಿರತವಾಗಿರುವ ವಿಶ್ವಕ್ಕೆ ಮಾರ್ಗದರ್ಶನ ನೀಡಲು ವಿಶ್ವ ಗುರುವನ್ನಾಗಿಸಲು ಕಠಿಣ ಪರಿಶ್ರಮ ಪಡಬೇಕಿದೆ” ಎಂದು ಅವರು ಕಿವಿಮಾತು ಹೇಳಿದರು.
ಆಗಸ್ಟ್ 26, 2025ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವವಾಗಿದ್ದು, ಅಂದು ಅದ್ದೂರಿ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲು ರಾಷ್ಟ್ರೀಯ ಸ್ವಯಂಸವೇಕ ಸಂಘ ಯೋಜಿಸಿದೆ.