ವಂದೇ ಮಾತರಂ ವಿರುದ್ಧ ಆರೆಸ್ಸೆಸ್ ನಿಂದ ಸದಾವತ್ಸಲೆ ಹಾಡು: ಖರ್ಗೆ ಟೀಕೆ
ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ, ನ. 7: ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ವು ದೇಶದ ಬದಲು ತಮ್ಮ ಸಂಘಟನೆಗಳನ್ನು ವೈಭವೀಕರಿಸಿಕೊಳ್ಳುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ. ಈ ಸಂಘಟನೆಗಳ ಬರಹಗಳು ಮತ್ತು ಸಾಹಿತ್ಯದಲ್ಲಿ ರಾಷ್ಟ್ರೀಯ ಹಾಡು ‘ವಂದೇ ಮಾತರಂ’ನ ಉಲ್ಲೇಖ ಎಲ್ಲೂ ಬರುವುದಿಲ್ಲ ಎಂದು ಅವರು ಬೆಟ್ಟುಮಾಡಿದ್ದಾರೆ.
ದೇಶದ ರಾಷ್ಟ್ರೀಯ ಹಾಡಿನ 150ನೇ ವರ್ಷಾಚರಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಸಂದೇಶವೊಂದನ್ನು ಹಾಕಿರುವ ಖರ್ಗೆ, ಈ ಹಾಡಿನೊಂದಿಗೆ ಬೆರೆತ ಪಕ್ಷದ ಪರಂಪರೆಯನ್ನು ಜ್ಞಾಪಿಸಿದರು. ಅದೇ ವೇಳೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ನ ಬೂಟಾಟಿಕೆಯತ್ತ ಬೆಟ್ಟು ಮಾಡಿದ ಅವರು, ‘‘ಈ ಸ್ವಯಂಘೋಷಿತ ರಾಷ್ಟ್ರೀಯತೆಯ ರಕ್ಷಕರು ತಮ್ಮ ಶಾಖೆಗಳಲ್ಲಿ ಮತ್ತು ಕಚೇರಿಗಳಲ್ಲಿ ವಂದೇ ಮಾತರಂ ಆಗಲಿ, ರಾಷ್ಟ್ರಗೀತೆಯನ್ನಾಗಲಿ ಎಂದೂ ಹಾಡಿಲ್ಲ’’ ಎಂದು ಹೇಳಿದರು.
‘‘ಬದಲಿಗೆ, ಅವರು ‘ನಮಸ್ತೆ ಸದಾ ವತ್ಸಲೆ’ ಹಾಡನ್ನು ಹಾಡುವುದನ್ನು ಮುಂದುವರಿಸಿದ್ದಾರೆ. ಈ ಹಾಡು ಅವರ ಸಂಘಟನೆಗಳನ್ನು ವೈಭವೀಕರಿಸುತ್ತದೆಯೇ ಹೊರತು ಭಾರತವನ್ನಲ್ಲ. ವಂದೇ ಮಾತರಂ ಹಾಡಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಿದರೂ, 1925ರಲ್ಲಿ ಸ್ಥಾಪನೆಯಾದಂದಿನಿಂದ ಆರೆಸ್ಸೆಸ್ ಈ ಹಾಡನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಅದರ ಬರಹ ಮತ್ತು ಸಾಹಿತ್ಯದಲ್ಲಿ ಒಂದು ಕಡೆಯಾದರೂ ಇದರ ಪ್ರಸ್ತಾವ ಬರುವುದಿಲ್ಲ’’ ಎಂದು ಖರ್ಗೆ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷವು ‘ವಂದೇ ಮಾತರಂ’ ಮತ್ತು ‘ಜನಗಣಮನ’ ಎರಡು ಹಾಡುಗಳ ಬಗ್ಗೆಯೂ ಅಗಾಧ ಹೆಮ್ಮೆಯನ್ನು ಹೊಂದಿದೆ. ಕಾಂಗ್ರೆಸ್ ನ ಪ್ರತಿ ಸಭೆ ಮತ್ತು ಕಾರ್ಯಕ್ರಮದಲ್ಲಿ ಈ ಎರಡೂ ಹಾಡುಗಳನ್ನು ಅತ್ಯಂತ ಗೌರವದಿಂದ ಹಾಡಲಾಗುತ್ತದೆ. ಇದು ಭಾರತದ ಏಕತೆ ಮತ್ತು ಅಭಿಮಾನವನ್ನು ಸೂಚಿಸುತ್ತದೆ’’ ಎಂದು ಖರ್ಗೆ ಹೇಳಿದರು.