×
Ad

ಸರ್ಕಾರಿ ಕಚೇರಿಗಳಲ್ಲಿ ಎಷ್ಟು ಸಮೋಸಾ ತಿನ್ನುತ್ತಾರೆ? ಆರ್‌ಟಿಐ ಕಾಯ್ದೆ ದುರ್ಬಳಕೆಗೆ ಮುಂಬೈ ಹೈಕೋರ್ಟ್ ಕಿಡಿ

Update: 2025-06-12 07:55 IST

ಸಾಂದರ್ಭಿಕ ಚಿತ್ರ

ಮುಂಬೈ: ಸರ್ಕಾರಿ ಕಚೇರಿಗಳಲ್ಲಿ ಪ್ರತಿ ದಿನ ಎಷ್ಟು ಸಮೋಸಾ ವಿತರಿಸಲಾಗುತ್ತದೆ ಎಂಬಂಥ ಕುಚೋದ್ಯದ ಪ್ರಶ್ನೆಗಳು ಇಡೀ ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ರಾಜ್ಯ ಮಾಹಿತಿ ಆಯೋಗ (ಎಸ್‍ಐಸಿ) ಮುಂಬೈ ಹೈಕೋರ್ಟ್‍ನಲ್ಲಿ ಬುಧವಾರ ಪ್ರತಿಪಾದಿಸಿದೆ. ಸರ್ಕಾರಿ ಕಚೇರಿಗಳಲ್ಲಿ ವಿತರಣೆಯಾಗುವ ಸಮೋಸಾ ಸಂಖ್ಯೆಯನ್ನು ನೀಡುವಂತೆ ಕೋರಿರುವ ಪ್ರಶ್ನೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿದೆ ಎಂಬ ಸ್ವಾರಸ್ಯಕರ ಮಾಹಿತಿಯನ್ನು ಆಯೋಗ ಕೋರ್ಟ್‍ಗೆ ನೀಡಿತು.

ಆರ್‌ಟಿಐ ದುರ್ಬಳಕೆ ಬಗ್ಗೆ ಹೈಕೋರ್ಟ್ ಕೂಡಾ ಗರಂ ಆಗಿದೆ. ಜನರಿಗೆ ಪ್ರಯೋಜನವಾಗಬೇಕು ಎಂಬ ಉದ್ದೇಶದಿಂದ ಕಾನೂನುಗಳನ್ನು ಮಾಡಲಾಗುತ್ತದೆ. ಆದರೆ ಅಳಿಯಂದಿರನ್ನು ಹುಡುಕಲು, ಸರ್ಕಾರಿ ಉದ್ಯೋಗಿಗಳ ಮಾಹಿತಿ ಪಡೆಯಲು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇದು ವೈರುದ್ಧ್ಯದ ಸನ್ನಿವೇಶ ಎಂದು ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಢೆ ಮತ್ತು ನ್ಯಾಯಮೂರ್ತಿ ಸಂದೀಪ್ ಮರ್ನೆ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮಾಜಿ ಮುಖ್ಯ ಮಾಹಿತಿ ಆಯುಕ್ತ ಶೈಲೇಶ್ ಗಾಂಧಿ ಮತ್ತು ಐದು ಮಂದಿ ಆರ್‌ಟಿಐ ಕಾರ್ಯಕರ್ತರು ಸಲ್ಲಿಸಿದ ಸಾರ್ವನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಎರಡನೇ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಎಸ್‍ಐಸಿ ಮಾರ್ಗಸೂಚಿಯನ್ನು ರಚಿಸುವಂತೆ ಎಸ್‍ಐಸಿಗೆ ನಿರ್ದೇಶನ ನೀಡಬೇಕು ಮತ್ತು ದೂರು ಸಲ್ಲಿಕೆಯಾದ 45 ದಿನಗಳ ಒಳಗಾಗಿ ಮಾಹಿತಿಗೆ ವ್ಯವಸ್ಥೆ ಮಾಡಬೇಕು ಎಂದು ಕೋರಿ ಪಿಐಎಲ್ ಸಲ್ಲಿಕೆಯಾಗಿದೆ. ಹುದ್ದೆಗಳು ಖಾಲಿ ಇರುವ ಕಾರಣದಿಂದ ವಿಲೇವಾರಿ ವಿಳಂಬವಾಗುತ್ತಿದೆ ಎಂದು ಎಸ್‍ಐಸಿ ಸಬೂಬು ನೀಡಿತು.

ಸರ್ಕಾರಿ ಅಭಿಯೋಜಕರಾದ ಜ್ಯೋತಿ ಚವಾಣ್, ರಾಜ್ಯ ಮಾಹಿತಿ ಆಯುಕ್ತರ ಏಳು ಅನುಮೋದಿತ ಹುದ್ದೆಗಳು ಮತ್ತು ಒಂದು ಸಿಐಸಿ ಹುದ್ದೆಗಳಿವೆ. ಸಿಐಸಿ ಸೇರಿದಂತೆ ನಾಲ್ಕು ಹುದ್ದೆಗಳನ್ನು ಏಪ್ರಿಲ್‍ನಲ್ಲಿ ಭರ್ತಿ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು. ರಾಜ್ಯದಲಿ ಒಂದು ಲಕ್ಷ ಎರಡನೇ ಹಂತದ ಮೇಲ್ಮನವಿ ಹಾಗೂ ದೂರುಗಳು ಬಾಕಿ ಇರುವುದರಿಂದ ಮಾಹಿತಿ ಆಯುಕ್ತರ ಮೂರು ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸುವಂತೆ ಅರ್ಜಿದಾರರು ಕೋರಿದ್ದಾರೆ.

ಎರಡನೇ ಮೇಲ್ಮನವಿಯ ಇತ್ಯರ್ಥಕ್ಕೆ ಆರ್‌ಟಿಐ ಕಾಯ್ದೆ ಯಾವುದೇ ಸಮಯಮಿತಿ ನಿಗದಿಪಡಿಸಿಲ್ಲ. ಆದರೆ ಎಸ್‍ಐಸಿ ಸಾಧ್ಯವಾದಷ್ಟು ಬೇಗನೇ ಈ ಮೇಲ್ಮನವಿಗಳನ್ನು ಇತ್ಯರ್ಥಪಡಿಸುತ್ತದೆ ಎಂಬ ನಿರೀಕ್ಷೆ ಮತ್ತು ವಿಶ್ವಾಸದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸಲಾಗುತ್ತಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News