ವೇಗವಾಗಿ ಕುಸಿಯುತ್ತಿರುವ ರೂಪಾಯಿ
ಡಾಲರ್‌ಗೆ 90.48ಕ್ಕೆ ಕುಸಿತ: ಇನ್ನೊಂದು ಸಾರ್ವಕಾಲಿಕ ದಾಖಲೆ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ, ಡಿ. 11: ಭಾರತೀಯ ರೂಪಾಯಿ ತನ್ನ ಕೆಳಮುಖ ಯಾನವನ್ನು ಮುಂದುವರಿಸಿದ್ದು, ಗುರುವಾರ ಅಮೆರಿಕದ ಡಾಲರ್ ಎದುರು 90.48ಕ್ಕೆ ಕುಸಿದು ಮತ್ತೊಂದು ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. ಅಮೆರಿಕದ ರಿಸರ್ವ್ ಬ್ಯಾಂಕ್ ಬಡ್ಡಿ ದರ ಕಡಿತ ಮಾಡಿದ ಬಳಿಕ, ರೂಪಾಯಿ ಸ್ವಲ್ಪ ಚೇತರಿಕೆಯ ಲಕ್ಷಣವನ್ನು ತೋರಿಸಿದರೂ, ವಾಣಿಜ್ಯೋದ್ಯಮಗಳು ಮತ್ತು ಬ್ಯಾಂಕ್‌ಗಳಿಂದ ಡಾಲರ್ ಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ರೂಪಾಯಿ ಬೇಡಿಕೆ ಕುಸಿಯಿತು.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು 2026ರ ಮಾರ್ಚ್‌ನಲ್ಲಷ್ಟೇ ಸಾಧ್ಯ ಎಂಬ ಇಂಗಿತವನ್ನು ಮುಖ್ಯ ಹಣಕಾಸು ಸಲಹೆಗಾರ ವಿ. ಅನಂತ ನಾಗೇಶ್ವರನ್ ವ್ಯಕ್ತಪಡಿಸಿದ್ದಾರೆ ಎಂದು ಹೇಳುವ ವರದಿಗಳೂ ರೂಪಾಯಿ ಮೌಲ್ಯ ಕುಸಿತದಲ್ಲಿ ಪಾತ್ರ ವಹಿಸಿವೆ ಎನ್ನಲಾಗಿದೆ.
ರೂಪಾಯಿ ಗುರುವಾರ ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ಎದುರು 89.95ರಲ್ಲಿ ವ್ಯವಹಾರ ಆರಂಭಿಸಿತು. ಬಳಿಕ ದುರ್ಬಲಗೊಳ್ಳುತ್ತಾ ಸಾಗಿ 90.48 ರೂಪಾಯಿಗೆ ಕುಸಿದು ದಿನದ ಕನಿಷ್ಠ ಮೌಲ್ಯ ಆಯಿತು. ಇದು ಹಿಂದಿನ ದಿನದ ಮುಕ್ತಾಯಕ್ಕಿಂತ 54 ಪೈಸೆ ಕಡಿಮೆಯಾಗಿದೆ.
ಬುಧವಾರ ಡಾಲರ್ ಎದುರು ರೂಪಾಯಿಯ ಕನಿಷ್ಠ ಮೌಲ್ಯ 89.97 ಆಗಿತ್ತು.
ಬುಧವಾರ ಅಮೆರಿಕದ ರಿಸರ್ವ್ ಬ್ಯಾಂಕ್ ಸಾಲಗಳ ಬಡ್ಡಿದರ ಕಡಿಮೆ ಮಾಡಿತ್ತು. ಅದರಿಂದಾಗಿ ಆರಂಭದಲ್ಲಿ ಡಾಲರ್ ಮೇಲೆ ಒತ್ತಡ ಬಿದ್ದಿತ್ತು. ಏಶ್ಯನ್ ಕರೆನ್ಸಿಗಳು ಮಿಶ್ರ ಪ್ರತಿಕ್ರಿಯೆ ತೋರಿದವು. ಡಾಲರ್ ಸೂಚ್ಯಂಕವು ಎರಡು ತಿಂಗಳ ಕುಸಿತದಿಂದ ಕೊಂಚ ಚೇತರಿಸಿಕೊಂಡಿತು.
ಆದರೆ. ಡಾಲರ್ ದೌರ್ಬಲ್ಯದಿಂದ ರೂಪಾಯಿಗೆ ಏನೂ ಉಪಯೋಗವಾಗಲಿಲ್ಲ.
ವಿದೇಶಿ ಮತ್ತು ದೇಶಿ ಖಾಸಗಿ ಬ್ಯಾಂಕ್‌ಗಳು ಭಾರೀ ಪ್ರಮಾಣದಲ್ಲಿ ಡಾಲರ್ ಖರೀದಿಸುತ್ತಿರುವುದು ರೂಪಾಯಿ ಕುಸಿತಕ್ಕೆ ಮುಖ್ಯ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ರೂಪಾಯಿ ಈಗ 2022ರ ಬಳಿಕದ ತನ್ನ ಅತ್ಯಧಿಕ ವಾರ್ಷಿಕ ಕುಸಿತದತ್ತ ದಾಪುಗಾಲಿಕ್ಕುತ್ತಿದೆ. ಭಾರತೀಯ ರಫ್ತುಗಳ ಮೇಲೆ ಅಮೆರಿಕವು ಅತ್ಯಧಿಕ ಸುಂಕ ವಿಧಿಸುತ್ತಿರುವ ಹಿನ್ನೆಲೆಯಲ್ಲಿ, ವಿದೇಶೀಯರು ಭಾರತೀಯ ಶೇರು ಮಾರುಕಟ್ಟೆಗಳಿಂದ ತಮ್ಮ ಹಣವನ್ನು ಭಾರೀ ಪ್ರಮಾಣದಲ್ಲಿ ವಾಪಸ್ ಪಡೆಯುತ್ತಿದ್ದಾರೆ. ಇದು ರೂಪಾಯಿಯನ್ನು ಮತ್ತಷ್ಟು ದುರ್ಬಲಗೊಳಿಸುವ ಸಾಧ್ಯತೆಯಿದೆ.