×
Ad

ಸಹೋದರಿಯ ಮದುವೆಗೆ ಹಾಜರಾಗಲು ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು

Update: 2025-12-11 17:33 IST

ಉಮರ್ ಖಾಲಿದ್ (Photo: PTI)

ಹೊಸದಿಲ್ಲಿ: 2020 ರ ಈಶಾನ್ಯ ದಿಲ್ಲಿ ಗಲಭೆಯ ಪಿತೂರಿ ಆರೋಪದಲ್ಲಿ ಬಂಧನದಲ್ಲಿರುವ ಜೆಎನ್‌ಯುನ ಹಳೇ ವಿದ್ಯಾರ್ಥಿ ಹಾಗೂ ಹೋರಾಟಗಾರ ಉಮರ್ ಖಾಲಿದ್ ಅವರಿಗೆ ತಮ್ಮ ಸಹೋದರಿಯ ಮದುವೆಗೆ ಹಾಜರಾಗಲು ಕರ್ಕಾರ್ಡೂಮಾ ನ್ಯಾಯಾಲಯವು ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಡಿ. 16 ರಿಂದ 29 ರವರೆಗೆ ಜಾಮೀನು ಅನ್ವಯವಾಗಲಿದ್ದು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್‌ಪೇಯಿ ಅವರು 20,000 ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಎರಡು ಶ್ಯೂರಿಟಿಗಳೊಡನೆ ಜಾಮೀನು ನೀಡುವಂತೆ ನಿರ್ದೇಶಿಸಿದ್ದಾರೆ.

ಜಾಮೀನು ಅವಧಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿ ಅಥವಾ ವ್ಯಕ್ತಿಯನ್ನು ಸಂಪರ್ಕಿಸಬಾರದೆಂದು ಖಾಲಿದ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತನಿಖಾ ಅಧಿಕಾರಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಒದಗಿಸುವುದು ಹಾಗೂ ಅದು ಸಕ್ರಿಯವಾಗಿರಬೇಕೆಂಬ ಶರತ್ತನ್ನೂ ವಿಧಿಸಲಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿರುವ ನ್ಯಾಯಾಲಯ, ಖಾಲಿದ್ ಅವರು ಕುಟುಂಬದ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರನ್ನು ಮಾತ್ರ ಭೇಟಿಯಾಗಲು ಅವಕಾಶ ನೀಡಿದೆ. ಅವರು ತಮ್ಮ ಮನೆಯಲ್ಲಿ ಅಥವಾ ವಿವಾಹ ಸಮಾರಂಭ ನಡೆಯುವ ಸ್ಥಳದಲ್ಲಿಯೇ ಇರಬೇಕು ಎಂದು ಆದೇಶಿಸಲಾಗಿದೆ.

ಜಾಮೀನು ಅವಧಿ ಪೂರ್ಣಗೊಳ್ಳುವ ಡಿಸೆಂಬರ್ 29ರ ಸಂಜೆ, ಖಾಲಿದ್ ಅವರು ಸಂಬಂಧಿಸಿದ ಜೈಲಿನ ಸೂಪರಿಂಟೆಂಡೆಂಟ್ ಮುಂದೆ ಶರಣಾಗಬೇಕು ಎಂದು ಸೂಚಿಸಲಾಗಿದೆ.

ಈಗಾಗಲೇ 2022 ಮತ್ತು 2023 ರಲ್ಲೂ ಕುಟುಂಬದ ಮದುವೆಗಳಿಗೆ ಹಾಜರಾಗುವ ಸಲುವಾಗಿ ಅವರಿಗೆ ಮಧ್ಯಂತರ ಜಾಮೀನು ಮಂಜೂರಾಗಿತ್ತು. ನಿಯಮಿತ ಜಾಮೀನು ನೀಡುವ ಕುರಿತು ವಿಚಾರಣಾ ನ್ಯಾಯಾಲಯ ಹಾಗೂ ದಿಲ್ಲಿ ಹೈಕೋರ್ಟ್ ಮೊದಲು ನಿರಾಕರಿಸಿತ್ತು.

ಯುಎಪಿಎ ಸೇರಿದಂತೆ ಹಲವು ಗಂಭೀರ ಕಲಂಗಳ ಅಡಿಯಲ್ಲಿ ದಾಖಲಾದ ಎಫ್‌ಐಆರ್ 59/2020ರಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ನತಾಶಾ ನರ್ವಾಲ್ ಸೇರಿದಂತೆ 18 ಮಂದಿ ಆರೋಪಿಗಳು ಎಂದು ಹೆಸರಿಸಲಾಗಿದೆ. ಇಡೀ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಲಿದ್ ಸೇರಿದಂತೆ ಹಲವರ ಜಾಮೀನು ಅರ್ಜಿಗಳ ಮೇಲಿನ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಕಾಯ್ದಿರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News