ಮತ್ತೆ ಸ್ವಲ್ಪ ಇಳಿಕೆ ಕಂಡ ಚಿನ್ನ; ಬೆಳ್ಳಿ ದಾಖಲೆ ಏರಿಕೆ
ಅಮೆರಿಕದ ಫೆಡರಲ್ ರಿಸರ್ವ್ ನಿರೀಕ್ಷೆಯ ಪ್ರಕಾರ ಸತತ ಮೂರನೇ ಬಾರಿ ಪ್ರಮುಖ ಬಡ್ಡಿದರ ಕಡಿತಗೊಳಿಸಿದೆ. ಸಾಮಾನ್ಯವಾಗಿ ಫೆಡ್ ಬಡ್ಡಿದರ ಇಳಿಸಿದರೆ ಚಿನ್ನದ ಬೆಲೆ ಏರುತ್ತದೆ. ಆದರೆ ಮುಂದಿನ ವರ್ಷದ ಬಡ್ಡಿದರ ಕಡಿತದ ಅನಿಶ್ಚಿತತೆಯಿಂದಾಗಿ ಬುಧವಾರ ಏರಿಕೆಯಾದ ಚಿನ್ನ ಗುರುವಾರ ಸ್ವಲ್ಪ ಇಳಿದಿದೆ. ಹಾಗಿದ್ದರೆ, ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಅಮೆರಿಕದ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬಡ್ಡಿದರವನ್ನು ಮತ್ತೊಮ್ಮೆ ಇಳಿಸಲಾಗಿದೆ. ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್ಒಎಂಸಿ) ಸಭೆಯ ನಿರ್ಧಾರಗಳನ್ನು ಫೆಡ್ ಅಧ್ಯಕ್ಷ ಜೆರೋಮ್ ಪಾವೆಲ್ ಅವರು ಬುಧವಾರ ಪ್ರಕಟಿಸಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಡಿಸೆಂಬರ್ 10ರ ಮಧ್ಯರಾತ್ರಿ 11.30ರ ನಂತರ ಈ ಘೋಷಣೆ ಹೊರಬಿದ್ದಿದೆ. 25 ಮೂಲಾಂಶಳಷ್ಟು ಬಡ್ಡಿದರ ಕಡಿತಗೊಳಿಸಲಾಗಿದ್ದು, ಈಗ ಅಲ್ಲಿನ ಬಡ್ಡಿದರದ ಶ್ರೇಣಿ ಶೇ 3.5 - ಶೇ3.75 ಕ್ಕೆ ಇಳಿದಿದೆ. ಅಮೆರಿಕದ ಆರ್ಥಿಕತೆಗೆ ಬೆಂಬಲ ನೀಡಲು ಮತ್ತು ಉದ್ಯೋಗ ಸೃಷ್ಟಿ ಸುಧಾರಿಸಲು ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಪಾವೆಲ್ ತಿಳಿಸಿದ್ದಾರೆ.
ಈ ವರ್ಷದಲ್ಲಿ ಫೆಡ್ ಸತತ ಮೂರನೇ ಬಾರಿಗೆ ದರ ಕಡಿತಗೊಳಿಸಿದೆ (ಸೆಪ್ಟೆಂಬರ್, ಅಕ್ಟೋಬರ್ ಮತ್ತು ಈಗ ಡಿಸೆಂಬರ್‌ನಲ್ಲಿ). ಇದರಿಂದಾಗಿ ಅಮೆರಿಕದಲ್ಲಿ ಗೃಹ ಸಾಲ ಮತ್ತು ಕಾರು ಸಾಲಗಳ ಬಡ್ಡಿ ದರಗಳು ಕಡಿಮೆಯಾಗಲಿವೆ. ಬಡ್ಡಿದರ ಇಳಿಕೆಯ ಸಂಕೇತಗಳಿಂದಾಗಿ ಕಳೆದ ಕೆಲವು ದಿನಗಳಿಂದ ಏರುತ್ತಿದ್ದ ಚಿನ್ನದ ಬೆಲೆ, ಅಧಿಕೃತ ಘೋಷಣೆಯ ನಂತರ ಮತ್ತೆ ಏರಿಳಿತ ಕಂಡಿದೆ.
ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡಿದ ನಂತರ ಮುಂದಿನ ವರ್ಷ ಸಡಿಲಗೊಳಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ ಕಾರಣ ಅನಿಶ್ಚಿತತೆ ಉಂಟಾಗಿ ಗುರುವಾರ ಚಿನ್ನದ ಬೆಲೆ ಒಂದು ವಾರದ ಗರಿಷ್ಠ ಮಟ್ಟದಿಂದ ಕುಸಿದಿದೆ. ಆದರೆ ಬೆಳ್ಳಿ ದಾಖಲೆಯ ಗರಿಷ್ಠ ಪಟ್ಟ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?
ಗುರುವಾರ ಡಿಸೆಂಬರ್ 11ರಂದು ಮಂಗಳೂರಿನಲ್ಲಿ ಬಂಗಾರದ ಬೆಲೆ ಮತ್ತೆ ಸ್ವಲ್ಪ ಇಳಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ. 13,020 (-11), 22 ಕ್ಯಾರೆಟ್ ಚಿನ್ನಕ್ಕೆ ರೂ. 11,935 (-10) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 9,765 (-8) ಬೆಲೆಗೆ ಕುಸಿದಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಒಂದು ಗ್ರಾಂ ಚಿನ್ನ
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 9,774
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 11,946
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 13,032
ಎಂಟು ಗ್ರಾಂ ಚಿನ್ನ
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 78,192
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 95,568
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,04,256
ಬೆಳ್ಳಿ ದರದಲ್ಲಿ ಭಾರೀ ಏರಿಕೆ
ಚಿನ್ನಕ್ಕಿಂತಲೂ ಬೆಳ್ಳಿ ದರ ಅತಿ ವೇಗವಾಗಿ ಏರಿಕೆಯಾಗಿದೆ. ನಿನ್ನೆ ಬುಧವಾರ ಒಂದೇ ದಿನದಲ್ಲಿ ಬೆಳ್ಳಿಯ ಬೆಲೆ 8,000 ರೂಪಾಯಿ ಏರಿಕೆಯಾಗಿತ್ತು. ಇಂದು ಗುರುವಾರ ಬೆಳ್ಳಿ ಬೆಲೆ ಮತ್ತೆ ರೂ. 2000 ಏರಿಕೆಯಾಗಿದ್ದು, ರೂ. 2.01 ಲಕ್ಷ ರೂಪಾಯಿ ತಲುಪಿದೆ. ಈ ಹಿಂದೆ ಅಕ್ಟೋಬರ್ 15ರಂದು ದಾಖಲಿಸಿದ್ದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮೀರಿಸಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಬೆಳ್ಳಿಗೆ ಇರುವ ಭಾರೀ ಬೇಡಿಕೆಯಿಂದಾಗಿ ಬೆಳ್ಳಿ ಬೆಲೆ ಏರಿಕೆಯಾಗುತ್ತಿದೆ.