×
Ad

Goa ನೈಟ್‌ಕ್ಲಬ್ ದುರಂತ | ಥೈಲ್ಯಾಂಡ್‌ನಲ್ಲಿ ಲುತ್ರಾ ಸಹೋದರರು ವಶಕ್ಕೆ: ಗಡೀಪಾರು ಪ್ರಕ್ರಿಯೆ ಪ್ರಾರಂಭ

Update: 2025-12-11 11:54 IST

Photo credit: X/@Ashoke_Raj

ಹೊಸದಿಲ್ಲಿ/ಗೋವಾ: ಗೋವಾದ ಅರ್ಪೋರಾ ನೈಟ್‌ಕ್ಲಬ್‌ ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ ಬಳಿಕ ಭಾರತದಿಂದ ಪರಾರಿಯಾಗಿದ್ದ ದಿಲ್ಲಿಯ ಉದ್ಯಮಿ ಸಹೋದರರು ಸೌರಭ್ ಮತ್ತು ಗೌರವ್ ಲುತ್ರಾ ಅವರನ್ನು ಥೈಲ್ಯಾಂಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಕೈ ಕಟ್ಟಿ, ಪಾಸ್‌ಪೋರ್ಟ್‌ಗಳನ್ನು ಹಿಡಿದಿರುವ ಸ್ಥಿತಿಯಲ್ಲಿ ಸ್ಥಳೀಯ ಪೊಲೀಸ್‌ ಅಧಿಕಾರಿಗಳ ನಡುವೆ ನಿಂತಿರುವ ಅವರ ಚಿತ್ರಗಳು ವೈರಲ್ ಆಗಿದೆ.

ರೋಮಿಯೋ ಲೇನ್ ಎಂಬ ಪ್ರಸಿದ್ಧ ರೆಸ್ಟೋರೆಂಟ್–ನೈಟ್‌ಕ್ಲಬ್ ಅನ್ನು ಭಾರತ ಹಾಗೂ ವಿದೇಶದ 22 ನಗರಗಳಲ್ಲಿ ನಡೆಸುತ್ತಿರುವ ಲುತ್ರಾ ಸಹೋದರರು, ಶನಿವಾರ ತಡರಾತ್ರಿ ಅವರ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಫುಕೆಟ್‌ಗೆ ಪಲಾಯನ ಮಾಡಿದ್ದರು. ಈಗ ಇವರ ವಿರುದ್ಧ ಕೊಲೆಯಲ್ಲದ ನರಹತ್ಯೆ ಅಪರಾಧ ಮತ್ತು ಗಂಭೀರ ನಿರ್ಲಕ್ಷ್ಯದ ಆರೋಪಗಳು ದಾಖಲಾಗಿದ್ದು, ಪೊಲೀಸರು ಭಾರತಕ್ಕೆ ಗಡೀಪಾರು ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಬೆಂಕಿ ಅವಘಡದ ವೇಳೆ ನೈಟ್‌ಕ್ಲಬ್‌ನಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು,ಅವರಲ್ಲಿ ಹೆಚ್ಚಿನವರು ಪ್ರವಾಸಿಗರು ಡಿಜೆ ಆನಂದಿಸುತ್ತಿದ್ದರು. ಬಾಲಿವುಡ್ ಗೀತೆಗಳ ಮಧ್ಯೆ ನರ್ತಕರ ಪ್ರದರ್ಶನ ನಡೆಯುತ್ತಿದ್ದಾಗ ವಿದ್ಯುತ್ ಪಟಾಕಿಗಳನ್ನೂ ಬಳಸಲಾಗುತ್ತಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಇದೇ ಪಟಾಕಿಗಳಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಅಲಂಕಾರದಲ್ಲಿ ಬಳಸಲಾಗಿದ್ದ ಸುಡುವ ವಸ್ತುಗಳ ಅತಿಯಾದ ಹಚ್ಚುವಿಕೆ ಮತ್ತು ಅಗ್ನಿ ಸುರಕ್ಷತಾ ಮಾನದಂಡಗಳ ಗಂಭೀರ ಉಲ್ಲಂಘನೆಯು ಅವಘಡವನ್ನು ಭೀಕರ ದುರಂತವನ್ನಾಗಿ ಪರಿವರ್ತಿಸಿತು ಎನ್ನಲಾಗಿದೆ. ಅದರೆ ನೈಟ್ ಕ್ಲಬ್ ಆವರಣದಲ್ಲಿ ಯಾವುದೇ ಕ್ರಿಯಾಶೀಲ ಅಗ್ನಿಶಾಮಕ ಸಾಧನಗಳು ಲಭ್ಯವಿರಲಿಲ್ಲ. ಜೊತೆಗೆ, ನೈಟ್‌ಕ್ಲಬ್‌ಗೆ ಹೋಗುವ ರಸ್ತೆ ತುಂಬಾ ಕಿರಿದಾಗಿದ್ದ ಕಾರಣ ಅಗ್ನಿಶಾಮಕ ವಾಹನಗಳು ಪ್ರವೇಶಿಸಲು ಸಾಧ್ಯವಾಗದೆ 400 ಮೀಟರ್ ದೂರದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಯಿತು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ವಿಳಂಬವಾಗಿ, ಬೆಂಕಿಯಿಂದ ಪಾರಾಗುವ ಸಾಧ್ಯತೆಗಳು ಕಡಿಮೆಯಾಯಿತು ಎಂದು ಅಂದಾಜಿಸಲಾಗಿದೆ.

ಅವಘಡದಲ್ಲಿ 25 ಜನರು ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ. ದುರಂತಕ್ಕೆ ಕಾರಣವಾದ ನಿರ್ಲಕ್ಷ್ಯಕ್ಕೆ ಹೊಣೆಗಾರರಾಗಿರುವ ಲುತ್ರಾ ಸಹೋದರರು ವಿದೇಶಕ್ಕೆ ಪರಾರಿಯಾಗಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಗೋವಾ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಇವರ ಗಡೀಪಾರು ಪ್ರಕ್ರಿಯೆಯನ್ನು ವೇಗಗೊಳಿಸಲು ಥೈಲ್ಯಾಂಡ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಅವರನ್ನು ವಿಚಾರಣೆಗೆ ಹಾಜರುಪಡಿಸುವ ನಿರೀಕ್ಷೆಯಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News