×
Ad

SIR | ಮತದಾರರ ಪಟ್ಟಿಯಿಂದ ಒಂದು ಅರ್ಹ ಹೆಸರು ತೆಗೆದರೂ ಧರಣಿ: ಮಮತಾ ಬ್ಯಾನರ್ಜಿ ಎಚ್ಚರಿಕೆ

Update: 2025-12-11 21:20 IST

ಮಮತಾ ಬ್ಯಾನರ್ಜಿ | Photo Credit : PTI

ಕೋಲ್ಕತಾ, ಡಿ. 11: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ, ಒಬ್ಬ ಅರ್ಹ ಮತದಾರನ ಹೆಸರನ್ನು ಅಳಿಸಿ ಹಾಕಿದರೂ ನಾನು ಧರಣಿ ನಡೆಸುತ್ತೇನೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.

ನಾನು ಈವರೆಗೆ ನನ್ನ ಮತದಾರ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಅವರು ಹೇಳಿದರು. ‘‘ನಾನು ನನ್ನ ಪೌರತ್ವವನ್ನು ಗಲಭೆಕೋರರ ಪಕ್ಷಕ್ಕೆ ಸಾಬೀತುಪಡಿಸಬೇಕಾದ ಅಗತ್ಯವಿದೆಯೇ?’’ ಎಂದು ಅವರು ಪ್ರಶ್ನಿಸಿದರು.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಾಗಿ ಭಾರತೀಯ ಚುನಾವಣಾ ಆಯೋಗವು ಈ ಕಸರತ್ತು ನಡೆಸುತ್ತಿದೆ ಎಂದು ಆರೋಪಿಸಿದೆ.

ಕೃಷ್ಣಾನಗರ್‌ ನಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ವಿಶೇಷ ತೀವ್ರ ಪರಿಷ್ಕರಣೆಯ ವಿಚಾರಣೆಯ ವೇಳೆ, ಜಿಲ್ಲಾಧಿಕಾರಿಗಳ ಕಾರ್ಯದ ಮೇಲ್ವಿಚಾರಣೆಗಾಗಿ ದಿಲ್ಲಿಯಿಂದ ಬಿಜೆಪಿ ಪರವಾಗಿ ಇರುವ ಅಧಿಕಾರಿಗಳನ್ನು ಚುನಾವಣಾ ಆಯೋಗವು ಕಳುಹಿಸುತ್ತಿದೆ ಎಂದು ಹೇಳಿದರು.

ಪಶ್ಚಿಮಬಂಗಾಳದಲ್ಲಿ 2026ರ ಮೊದಲಾರ್ಧದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

‘‘ಬಂಗಾಳಿಗಳನ್ನು ಬಾಂಗ್ಲಾದೇಶಿಗಳು ಎಂಬುದಾಗಿ ಕರೆದು ಅವರನ್ನು ಬಂಧನ ಶಿಬಿರಗಳಿಗೆ ಕಳುಹಿಸಲು ಕೇಂದ್ರ ಗೃಹ ಸಚಿವರು ಏನು ಬೇಕಾದರೂ ಮಾಡಬಹುದು’’ ಎಂದು ಅವರು ಹೇಳಿದರು.

ಚುನಾವಣಾ ಆಯೋಗವು ಈ ಕಸರತ್ತನ್ನು ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಅಸ್ತ್ರವಾಗಿ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ‘‘ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರು ಅಳಿಸಿಹೋದರೂ ನಾನು ಧರಣಿ ಮಾಡುತ್ತೇನೆ. ಪಶ್ಚಿಮಬಂಗಾಳದಲ್ಲಿ ಬಂಧನ ಕೇಂದ್ರಗಳಿರುವುದಿಲ್ಲ. ಅವರು ಮತಗಳಿಗಾಗಿ ಎಷ್ಟು ಹಪಹಪಿಸುತ್ತಿದ್ದಾರೆ ಎಂದರೆ, ಚುನಾವಣೆಗೆ ಎರಡು ತಿಂಗಳುಗಳು ಇರುವಾಗ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ಮಾಡುತ್ತಿದ್ದಾರೆ’’ ಎಂದು ಮುಖ್ಯಮಂತ್ರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News