ಕೂಡಂಕುಳಂ ಪರಮಾಣು ಸ್ಥಾವರದ ಪೂರ್ಣ ಸಾಮರ್ಥ್ಯ ಅಭಿವೃದ್ಧಿಗೆ ಬದ್ಧ: ಜಂಟಿ ಸುದ್ದಿಗೋಷ್ಠಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ
Photo Credit : NDTV
ಹೊಸದಿಲ್ಲಿ,ಡಿ.5: ಭಾರತದ ಅತ್ಯಂತ ದೊಡ್ಡ ಪರಮಾಣು ಸ್ಥಾವರವಾಗಿರುವ ಕೂಡಂಕುಳಂನಲ್ಲಿ ರಷ್ಯಾ ಭಾರತದೊಂದಿಗೆ ಸಹಕರಿಸುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಮಿಳುನಾಡಿನ ಕೂಡಂಕುಳಂ ಪರಮಾಣು ಸ್ಥಾವರದಲ್ಲಿಯ ಆರು ರಿಯಾಕ್ಟರ್ ಗಳ ಪೈಕಿ ಎರಡು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಅದು ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಬದ್ಧತೆಯನ್ನು ರಷ್ಯಾ ಹೊಂದಿದೆ.
‘ಕೂಡಂಕುಳಂನಲ್ಲಿ ಭಾರತದ ಅತ್ಯಂತ ದೊಡ್ಡ ಪರಮಾಣು ಸ್ಥಾವರ ನಿರ್ಮಾಣಕ್ಕೆ ಪ್ರಮುಖ ಯೋಜನೆಯೊಂದನ್ನು ನಾವು ಕಾರ್ಯಗತಗೊಳಿಸುತ್ತಿದ್ದೇವೆ. ಆರು ರಿಯಾಕ್ಟರ್ ಗಳ ಪೈಕಿ ಎರಡು ಈಗಾಗಲೇ ವಿದ್ಯುತ್ ಜಾಲದೊಂದಿಗೆ ಸಂಪರ್ಕಗೊಂಡಿದ್ದು, ನಾಲ್ಕು ರಿಯಾಕ್ಟರ್ ಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಈ ಪರಮಾಣು ಸ್ಥಾವರವು ಅದರ ಪೂರ್ಣ ಸಾಮರ್ಥ್ಯವನ್ನು ತಲುಪುವಂತೆ ಮಾಡುವುದು ಭಾರತದ ವಿದ್ಯುತ್ ಅಗತ್ಯಗಳಿಗೆ ಪ್ರಭಾವಶಾಲಿ ಕೊಡುಗೆಯನ್ನು ನೀಡುತ್ತದೆ ’ಎಂದು ಪುಟಿನ್ ಹೇಳಿದರು.
ರಷ್ಯಾದ ಸರಕಾರಿ ಸ್ವಾಮ್ಯದ ಪರಮಾಣು ನಿಗಮ ರೋಸಾಟಮ್ ಕೂಡಂಕುಳಂ ಸ್ಥಾವರದ ಮೂರನೇ ರಿಯಾಕ್ಟರ್ ಗಾಗಿ ಪರಮಾಣು ಇಂಧನದ ಮೊದಲ ಕಂತಿನ ಪೂರೈಕೆಯನ್ನು ದೃಢಪಡಿಸಿದ ಬಳಿಕ ಪುಟಿನ್ ಹೇಳಿಕೆಗಳು ಹೊರಬಿದ್ದಿವೆ.
ಶುಕ್ರವಾರ ನಡೆದ ದ್ವಿಪಕ್ಷೀಯ ಮಾತುಕತೆಗಳಲ್ಲಿ ಪುಟಿನ್ ಮತ್ತು ಮೋದಿ ಇಂಧನ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆ ಸೇರಿದಂತೆ ಹಲವಾರು ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಿದರು.
‘ಸಣ್ಣ ಮಾಡ್ಯುಲರ್ ರಿಯಾಕ್ಟರ್ ಗಳು ಮತ್ತು ತೇಲುವ ಪರಮಾಣು ವಿದ್ಯುತ್ ಸ್ಥಾವರಗಳ ಕುರಿತು ಹಾಗೂ ಔಷಧಿ ಅಥವಾ ಕೃಷಿಯಂತಹ ಪರಮಾಣು ತಂತ್ರಜ್ಞಾನಗಳ ಇಂಧನೇತರ ಅನ್ವಯಿಕೆಗಳ ಬಗ್ಗೆ ಉಭಯ ದೇಶಗಳು ಮಾತನಾಡಬಹುದು ಎಂದು ನಾವು ಭಾವಿಸಿದ್ದೇವೆ’ ಎಂದೂ ಪುಟಿನ್ ನುಡಿದರು.
ರಷ್ಯಾ ತೈಲ, ಅನಿಲ, ಕಲ್ಲಿದ್ದಲು ಮತ್ತು ಭಾರತದ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ಅಗತ್ಯವಿರುವ ಪ್ರತಿಯೊಂದರ ವಿಶ್ವಾಸಾರ್ಹ ಪೂರೈಕೆದಾರನಾಗಿದೆ ಎಂದು ಹೇಳಿದ ಪುಟಿನ್, ವೇಗವಾಗಿ ಬೆಳೆಯುತ್ತಿರುವ ಭಾರತೀಯ ಆರ್ಥಿಕತೆಗಾಗಿ ನಿರಂತರ ಇಂಧನ ರವಾನೆಯ ಭರವಸೆಯನ್ನು ನೀಡಿದರು.
ದೇಶದ ದಕ್ಷಿಣ ತುದಿಯಲ್ಲಿರುವ ಕೂಡಂಕುಳಂ ಪರಮಾಣು ಸ್ಥಾವರವು 6,000 ಮೆಗಾವ್ಯಾಟ್ ಗಳ ಒಟ್ಟು ಸಾಮರ್ಥ್ಯದೊಂದಿಗೆ ಆರು ವಿವಿಇಆರ್-1000 ರಿಯಾಕ್ಟರ್ ಗಳನ್ನು ಹೊಂದಲು ಸಜ್ಜಾಗಿದೆ. ಮೊದಲ ಎರಡು ರಿಯಾಕ್ಟರ್ ಗಳನ್ನು 2013 ಮತ್ತು 2016ರಲ್ಲಿ ವಿದ್ಯುತ್ ಜಾಲದೊಂದಿಗೆ ಸಂಪರ್ಕಿಸಲಾಗಿದ್ದು, ಇತರ ನಾಲ್ಕು ರಿಯಾಕ್ಟರ್ ಗಳು ಇನ್ನೂ ನಿರ್ಮಾಣಗೊಳ್ಳುತ್ತಿವೆ.
ರಷ್ಯಾ ದೀರ್ಘಾವಧಿಯ ಆಧಾರದಲ್ಲಿ ಪರಮಾಣು ಸ್ಥಾವರಕ್ಕೆ ಯುರೇನಿಯಂ ಇಂಧನವನ್ನು ಪೂರೈಸುತ್ತಿದೆ. ರೋಸಾಟಮ್ ಮೂರನೇ ರಿಯಾಕ್ಟರ್ ಗಾಗಿ ಇಂಧನ ಜೋಡಣೆಗಳನ್ನು ಶುಕ್ರವಾರ ಕಾರ್ಗೋ ವಿಮಾನದ ಮೂಲಕ ಭಾರತಕ್ಕೆ ತಲುಪಿಸಿದೆ.
ಮೂರನೇ ಮತ್ತು ನಾಲ್ಕನೇ ರಿಯಾಕ್ಟರ್ ಗಳಿಗೆ ಅವುಗಳ ಸಂಪೂರ್ಣ ಸೇವಾವಧಿಗೆ ಇಂಧನ ಪೂರೈಕೆಗಾಗಿ 2024ರಲ್ಲಿ ಮಾಡಿಕೊಳ್ಳಲಾಗಿರುವ ಒಪ್ಪಂದದಡಿ ರಷ್ಯಾದಿಂದ ಸಂಪೂರ್ಣ ಪೂರೈಕೆಯು ಏಳು ವಿಮಾನಗಳಲ್ಲಿ ಭಾರತವನ್ನು ತಲುಪಲಿದೆ.