ಶಬರಿಮಲೆ ದೇಗುಲದಲ್ಲಿನ ಕಲಾಕೃತಿಗಳಿಂದ ಇನ್ನೂ ಹೆಚ್ಚು ಪ್ರಮಾಣದ ಚಿನ್ನ ಕಾಣೆಯಾಗಿದೆ: ನ್ಯಾಯಾಲಯಕ್ಕೆ SIT ಮಾಹಿತಿ
ಶಬರಿಮಲೆ ದೇಗುಲ | Photo Credit : PTI
ತಿರುವನಂತಪುರ, ಜ.1: ಶಬರಿಮಲೆ ದೇವಾಲಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಕಲಾಕೃತಿಗಳಲ್ಲಿದ್ದ ಚಿನ್ನ ಕಾಣೆಯಾಗಿದೆ ಎಂದು ಈ ಪ್ರಸಿದ್ಧ ಕ್ಷೇತ್ರದಲ್ಲಿ ನಡೆದಿರುವ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತಿಳಿಸಿದೆ.
ದೇವಾಲಯದ ಗರ್ಭಗೃಹದ ಬಾಗಿಲಿನ ಚೌಕಟ್ಟುಗಳಲ್ಲಿರುವ ‘ಶಿವ’ ಹಾಗೂ ‘ಯಾಲಿ ರೂಪಂ’ ಕೆತ್ತನೆಯ ಬಿಂಬಗಳಿಗೆ ಹೊದಿಸಲಾಗಿದ್ದ ಚಿನ್ನ ನಾಪತ್ತೆಯಾಗಿದೆಯೆಂದು ಸಿಟ್ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಶಬರಿಮಲೆ ದೇವಾಲಯದಿಂದ ಅಪಹರಿಸಲಾದ ಚಿನ್ನವನ್ನು ಸಂಪೂರ್ಣವಾಗಿ ಪತ್ತೆಹಚ್ಚಲು ತನಿಖಾ ತಂಡಕ್ಕೆ ಇನ್ನೂ ಸಾಧ್ಯವಾಗಿಲ್ಲವೆಂದು ಸಿಟ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಕೇವಲ 584 ಗ್ರಾಂ ಚಿನ್ನವನ್ನಷ್ಟೇ ವಶಪಡಿಸಿಕೊಳ್ಳಲಾಗಿದ್ದು, ದೇವಾಲಯದಲ್ಲಿ ಇದಕ್ಕಿಂತಲೂ ಅಧಿಕ ಪ್ರಮಾಣದ ಚಿನ್ನ ಕಳವಾಗಿದೆಯೆಂದು ಅದು ಹೇಳಿದೆ.
ಚೆನ್ನೈನ ಸ್ಮಾರ್ಟ್ ಕ್ರಿಯೇಶನ್ಸ್‌ನಿಂದ 110 ಗ್ರಾಂ ಹಾಗೂ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿಯಿಂದ 474 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಸಿಟ್ ನ್ಯಾಯಾಲಯಕ್ಕೆ ತಿಳಿಸಿದೆ.
ಚೆನ್ನೈನ ಸ್ಮಾರ್ಟ್ ಕ್ರಿಯೇಶನ್ಸ್ ಸಂಸ್ಥೆಯು ಚಿನ್ನದ ಪ್ರತಿಮೆಯ ಮಾಡುವಿಕೆ ಹಾಗೂ ಇಲೆಕ್ಟ್ರೋಪ್ಲೇಟಿಂಗ್ ಕೆಲಸಗಳಿಗೆ ಶುಲ್ಕವಾಗಿ ಚಿನ್ನವನ್ನು ಪಡೆದುಕೊಂಡಿದ್ದರೆ, ಉಳಿದ ಚಿನ್ನವನ್ನು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿಗೆ ಕಳುಹಿಸಲಾಗಿತ್ತು.
ರೊದ್ದಂ ಜ್ಯುವೆಲ್ಲರಿಯ ಮಾಲಕನಾದ ಗೋವರ್ಧನ್‌ನನ್ನು ನ್ಯಾಯಾಂಗ ಕಸ್ಟಡಿಯಲ್ಲಿ ಇರಿಸಲಾಗಿದೆ.
ಈ ಎರಡೂ ಜ್ಯುವೆಲ್ಲರಿ ಅಂಗಡಿಗಳಿಂದ ವಶಪಡಿಸಿಕೊಳ್ಳಲಾದ ಚಿನ್ನವನ್ನು ಪರೀಕ್ಷೆಗಾಗಿ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ವಿಜ್ಞಾನ ಕೇಂದ್ರ (ವಿಎಸ್‌ಎಸ್‌ಸಿ)ಕ್ಕೆ ಕಳುಹಿಸಲಾಗಿದೆ. ಪರೀಕ್ಷೆಯ ಫಲಿತಾಂಶಗಳು ದೊರೆತ ನಂತರವಷ್ಟೇ ವಶಪಡಿಸಿಕೊಳ್ಳಲಾದ ಚಿನ್ನವು ದೇವಾಲಯದ ಚಿನ್ನಲೇಪಿತ ಶೀಟುಗಳಿಂದ ತೆಗೆಯಲ್ಪಟ್ಟಿದ್ದೇ ಎಂಬುದನ್ನು ದೃಢಪಡಿಸಿಕೊಳ್ಳಬಹುದಾಗಿದೆ.
ಒಂದು ವೇಳೆ ಹೊಂದಿಕೆಯಾಗದೆ ಇದ್ದಲ್ಲಿ, ಕಳವುಗೈದ ಚಿನ್ನವನ್ನು ಅಮೂಲ್ಯ ಕಲಾಕೃತಿಗಳ ಕಳ್ಳಸಾಗಣೆಯಲ್ಲಿ ನಿರತವಾಗಿರುವ ಜಾಲಗಳಿಗೆ ಹಸ್ತಾಂತರಿಸಲಾಗಿದೆಯೆಂಬ ಸಂದೇಹವು ಸಾಬೀತುಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.