ಭಾರತ ಜಾಗತಿಕ ಶಕ್ತಿಯಾಗುವುದನ್ನು ತಡೆಯಲು ಯಾವುದೇ ದೇಶಕ್ಕೆ ಸಾಧ್ಯವಿಲ್ಲ: ಸುಂಕ ಹೆಚ್ಚಳದ ಬಗ್ಗೆ ಟ್ರಂಪ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ
Photo : PTI
ಹೊಸದಿಲ್ಲಿ,ಆ.10: ಭಾರತೀಯ ಸರಕುಗಳ ಮೇಲೆ ಸುಂಕಗಳ ಕುರಿತು ರವಿವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪರೋಕ್ಷವಾಗಿ ಟೀಕಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ದೇಶದ ಕ್ಷಿಪ್ರ ಬೆಳವಣಿಗೆಯಿಂದ ಕೆಲವರು ಅಸಂತುಷ್ಟರಾಗಿದ್ದಾರೆ ಮತ್ತು ‘ಸಬ್ ಕೆ ಬಾಸ್ ತೋ ಹಮ್ ಹೈಂ(ಎಲ್ಲರ ಬಾಸ್ ನಾವು)’ ಎಂದು ಭಾವಿಸಿದ್ದಾರೆ ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಭಾರತೀಯ ನಿರ್ಮಿತ ಉತ್ಪನ್ನಗಳು ತಮ್ಮ ಸ್ಪರ್ಧಾತ್ಮಕತೆಯನ್ನು ಕಳೆದುಕೊಳ್ಳುವಂತಾಗಲು ಜಾಗತಿಕ ಮಾರುಕಟ್ಟೆಗಳಲ್ಲಿ ಅವುಗಳನ್ನು ದುಬಾರಿಯಾಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಭಾರತದ ತ್ವರಿತ ಅಭಿವೃದ್ಧಿಯನ್ನು ಕಂಡು ಅಸೂಯೆಗೊಂಡಿರುವ ಕೆಲವು ಜನರಿದ್ದಾರೆ. ಅವರು ತಾವೇ ಎಲ್ಲರಿಗೂ ಬಾಸ್ ಎಂದು ಭಾವಿಸುತ್ತಾರೆ. ಭಾರತ ವೇಗವಾಗಿ ಮುಂದುವರಿಯುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಸಿಂಗ್, ಭಾರತೀಯರು ನಿರ್ಮಿಸುವ ಸರಕುಗಳನ್ನು ವಿದೇಶಗಳ ಉತ್ಪನ್ನಗಳಿಗಿಂತ ದುಬಾರಿಯಾಗಿಸಲು ಮತ್ತು ಜಗತ್ತು ಅವುಗಳ ಖರೀದಿಯನ್ನು ನಿಲ್ಲಿಸುವಂತಾಗಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದರು.
ಅಮೆರಿಕವು ಭಾರತದಿಂದ ಆಮದುಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸುವುದರೊಂದಿಗೆ ಉಭಯ ದೇಶಗಳ ನಡುವೆ ವ್ಯಾಪಾರ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸಿಂಗ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.
ಅದಾಗಲೇ ಶೇ.25 ಸುಂಕ ಹೆಚ್ಚಳದೊಂದಿಗೆ ಇನ್ನೂ ಶೇ.25ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವ ಅಮೆರಿಕದ ನಿರ್ಧಾರವನ್ನು ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ ಎಂದು ಬಣ್ಣಿಸಿರುವ ಭಾರತವು , ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ತಾನು ಕೆಲಸ ಮಾಡುತ್ತೇನೆ ಎಂದು ಹೇಳಿದೆ.
ಭಾರತದ ತ್ವರಿತ ಪ್ರಗತಿಯನ್ನು ತಡೆಯಲು ಸಾಧ್ಯವಿಲ್ಲ ಮತ್ತು ಅದು ಪ್ರಮುಖ ಜಾಗತಿಕ ಶಕ್ತಿಯಾಗುವುದನ್ನು ತಡೆಯಲು ವಿಶ್ವದ ಯಾವುದೇ ದೇಶಕ್ಕೆ ಸಾಧ್ಯವಿಲ್ಲ ಎಂದು ಹೇಳಿದ ಸಿಂಗ್, ಹಿಂದೆ ವಿಮಾನ ಮತ್ತು ಶಸ್ತ್ರಾಸ್ತ್ರಗಳು ಸೇರಿದಂತೆ ತನ್ನ ರಕ್ಷಣಾ ಅಗತ್ಯಗಳಿಗಾಗಿ ಭಾರತವು ವಿದೇಶಿ ಪೂರೈಕೆದಾರರನ್ನು ಅವಲಂಬಿಸಿತ್ತು, ಆದರೆ ಈಗ ಅವುಗಳ ಪೈಕಿ ಹಲವನ್ನು ಭಾರತೀಯರೇ ದೇಶೀಯವಾಗಿ ಉತ್ಪಾದಿಸುತ್ತಿದ್ದಾರೆ, ರಾಷ್ಟ್ರೀಯ ಅಗತ್ಯಗಳನ್ನು ಪೂರೈಸುತ್ತಿದ್ದಾರೆ ಮತ್ತು ಇತರ ದೇಶಗಳಿಗೆ ರಫ್ತನ್ನು ಕೂಡ ಮಾಡುತ್ತಿದ್ದಾರೆ ಎಂದು ಒತ್ತಿ ಹೇಳಿದರು.