×
Ad

15,000 ಕೋಟಿ ರೂ. ಪೂರ್ವಜರ ಆಸ್ತಿ ಕಳೆದುಕೊಂಡ ನಟ ಸೈಫ್ ಅಲಿ ಖಾನ್

Update: 2025-07-05 17:34 IST

ಸೈಫ್ ಅಲಿ ಖಾನ್ (Photo: PTI)

ಭೋಪಾಲ: ಇತ್ತೀಚಿನ ಬೆಳವಣಿಗೆಯಂತೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ದೀರ್ಘಕಾಲದ ಭೋಪಾಲ್ ರಾಜಮನೆತನದ ಉತ್ತರಾಧಿಕಾರ ವಿವಾದದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್,‌ ಅವರ ಸೋದರಿಯರಾದ ಸೋಹಾ ಮತ್ತು ಸಬಾ ಹಾಗೂ ತಾಯಿ ಶರ್ಮಿಳಾ ಟಾಗೋರ್ ಅವರನ್ನು ಆಸ್ತಿಗಳ ಉತ್ತರಾಧಿಕಾರಿಗಳೆಂದು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯದ 2000ರ ಆದೇಶವನ್ನು ತಳ್ಳಿ ಹಾಕಿದೆ. ಖಾನ್ ಅವರ ಮುತ್ತಜ್ಜಿ ಮತ್ತು ಭೋಪಾಲದ ಕೊನೆಯ ನವಾಬ್ ಹಮೀದುಲ್ಲಾ ಖಾನ್ ಅವರ ಪುತ್ರಿ ಸಾಜಿದಾ ಖಾನ್ ಅವರಿಗೆ ಈ ಹಿಂದೆ ತಂದೆಯ ಆಸ್ತಿ ಹಂಚಿಕೆ ಮಾಡಿದ್ದನ್ನು ಪ್ರಶ್ನಿಸಿ ನವಾಬರ ಉತ್ತರಾಧಿಕಾರಿಗಳು ಮೇಲ್ಮನವಿಯನ್ನು ಸಲ್ಲಿಸಿದ್ದರು.

ಹಿಂದಿನ ತೀರ್ಪು ಸಾಜಿದಾ ಖಾನ್ ಅವರಿಗೆ ಪೂರ್ವಜರ ಆಸ್ತಿಯನ್ನು ನೀಡಿತ್ತು. ಆದರೆ 1960ರಲ್ಲಿ ನಿಧನರಾದ ನವಾಬರ ಉತ್ತರಾಧಿಕಾರಿಗಳು ಅವರ ನಿಧನದ ಸಮಯದಲ್ಲಿ ಅನ್ವಯವಾಗಿದ್ದ ಮುಸ್ಲಿಮ್ ವೈಯಕ್ತಿಕ ಕಾನೂನು(ಶರಿಯತ್),1937ರ ಪ್ರಕಾರ ಖಾಸಗಿ ಆಸ್ತಿಗಳ ವಿಭಜನೆಯನ್ನು ಬಯಸಿ 1999ರಲ್ಲಿ ವಿಚಾರಣಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಈಗ ಉಚ್ಚ ನ್ಯಾಯಾಲಯವು ಹೊಸದಾಗಿ ವಿಚಾರಣೆಯನ್ನು ಆರಂಭಿಸುವಂತೆ ಮತ್ತು ಒಂದು ವರ್ಷದೊಳಗೆ ಅದನ್ನು ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಈ ಆದೇಶವು ಭೋಪಾಲ್ ರಾಜ ಮನೆತನದ ಸಂಪೂರ್ಣ ಉತ್ತರಾಧಿಕಾರ ಸ್ವರೂಪವನ್ನು ಬದಲಿಸಬಹುದು ಎಂದು indianexpress.com ವರದಿ ಮಾಡಿದೆ.

ಭೋಪಾಲದಲ್ಲಿಯ ತಮ್ಮ 15,000 ಕೋಟಿ ರೂ.ಮೌಲ್ಯದ ಪೂರ್ವಜರ ಆಸ್ತಿಗಳನ್ನು ‘ಶತ್ರು ಆಸ್ತಿ’ ಎಂದು ಘೋಷಿಸಿದ ಸರಕಾರದ ನಿರ್ಧಾರದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ತಿರಸ್ಕರಿಸಿದ ಬಳಿಕ ಸೈಫ್ ಅಲಿ ಖಾನ್ ಅವರ ಕಾನೂನು ಸಮಸ್ಯೆಗಳು ಹೆಚ್ಚಾದವು. ಶತ್ರು ಆಸ್ತಿ ಕಾಯ್ದೆಯಡಿ ಭೋಪಾಲದಲ್ಲಿಯ ಪಟೌಡಿ ಕುಟುಂಬದ ಆಸ್ತಿಗಳನ್ನು ‘ಶತ್ರು ಆಸ್ತಿ’ಯೆಂದು ಘೋಷಿಸಿದ್ದ ಶತ್ರು ಆಸ್ತಿ ಸಂರಕ್ಷಣೆ ಇಲಾಖೆಯು 2014ರಲ್ಲಿ ನೀಡಿದ್ದ ನೋಟಿಸ್‌ನಲ್ಲಿ ವಿಚಾರಣೆಯನ್ನು ದಾಖಲಿಸಲಾಗಿದೆ. ಖಾನ್ ಅವರ ಬಾಲ್ಯದ ನಿವಾಸ ಫ್ಲ್ಯಾಗ್ ಸ್ಟಾಫ್ ಹೌಸ್, ನೂರ್-ಉಸ್-ಸಬಾ ಅರಮನೆ, ದಾರ್-ಉಸ್-ಸಲಾಂ, ಹಬೀಬಿ ಬಂಗಲೆ,ಅಹ್ಮದಾಬಾದ್ ಅರಮನೆ ಇತ್ಯಾದಿಗಳು ಈ ಆಸ್ತಿಗಳಲ್ಲಿ ಸೇರಿವೆ. 1968ರ ಶತ್ರು ಆಸ್ತಿ ಕಾಯ್ದೆಯು 1947ರಲ್ಲಿ ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ವಲಸೆ ಹೋದ ವ್ಯಕ್ತಿಗಳಿಗೆ ಸೇರಿದ ಆಸ್ತಿಗಳ ನಿಯಂತ್ರಣವನ್ನು ವಶಕ್ಕೆ ತೆಗೆದುಕೊಳ್ಳಲು ಸರಕಾರಕ್ಕೆ ಅಧಿಕಾರ ನೀಡಿದೆ.

ಖಾನ್ 2015ರಲ್ಲಿ ಶತ್ರು ಆಸ್ತಿ ಘೋಷಣೆಯ ವಿರುದ್ಧ ಕಾನೂನು ಹೋರಾಟ ನಡೆಸಿ ಉಚ್ಚ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆಯನ್ನು ಪಡೆದುಕೊಂಡಿದ್ದರು. ಆದರೆ ನ್ಯಾಯಾಲಯವು ಡಿ.13, 2024ರಂದು ತಡೆಯಾಜ್ಞೆಯನ್ನು ರದ್ದುಗೊಳಿಸಿತ್ತು. ತನ್ನ ಇತ್ತೀಚಿನ ಆದೇಶದಲ್ಲಿ ನ್ಯಾಯಾಲಯವು ತಮ್ಮ ಆಸ್ತಿಗಳನ್ನು ಮರಳಿ ಪಡೆಯಲು ಹಕ್ಕು ಪ್ರತಿಪಾದನೆ ಸಲ್ಲಿಸಲು ಖಾನ್ ಮತ್ತು ಅವರ ಕುಟುಂಬಕ್ಕೆ 30 ದಿನಗಳ ಕಾಲಾವಕಾಶವನ್ನು ನೀಡಿತ್ತು. ಆದರೆ ನಿಗದಿತ ಅವಧಿಯಲ್ಲಿ ಖಾನ್ ಕುಟುಂಬವು ಯಾವುದೇ ಅರ್ಜಿಯನ್ನು ಸಲ್ಲಿಸಿರಲಿಲ್ಲ.

ಭೋಪಾಲದ ನವಾಬ ಹಮೀದುಲ್ಲಾ ಖಾನರಿಗೆ ಮೂವರು ಪುತ್ರಿಯರಿದ್ದು, ಅವರ ಪೈಕಿ ಅಬಿದಾ ಸುಲ್ತಾನ್ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರೆ ಉಳಿದವರು ಭಾರತದಲ್ಲಿಯೇ ಉಳಿದಿದ್ದರು. ಖಾನ್ ಅಬಿದಾರ ಸೋದರಿ, ಭಾರತದಲ್ಲಿಯೇ ಉಳಿದು ನವಾಬ್ ಇಫ್ತಿಕಾರ್ ಅಲಿ ಖಾನ್ ಪಟೌಡಿಯವರನ್ನು ವಿವಾಹವಾಗಿದ್ದ ಸಾಜಿದಾ ಸುಲ್ತಾನ್ ಅವರ ಮೊಮ್ಮಗನಾಗಿದ್ದಾರೆ. ಆದರೆ ಸರಕಾರವು ಆಸ್ತಿಗಳ ಮೇಲೆ ನಿಯಂತ್ರಣ ಸಾಧಿಸಲು ವಲಸಿಗ ಪುತ್ರಿಯ ಕಾರಣವನ್ನು ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News