ನಟ ಶಾರುಖ್ ಖಾನ್, ನೆಟ್‌ಫ್ಲಿಕ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ
PC - barandbench
ಹೊಸದಿಲ್ಲಿ: ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ಐಆರ್‌ಎಸ್‌ಅಧಿಕಾರಿ ಸಮೀರ್ ವಾಂಖೆಡೆ ದಿಲ್ಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ʼಬ್ಯಾಡ್ಸ್ ಆಫ್ ಬಾಲಿವುಡ್ʼ ಸರಣಿ ತನ್ನ ವಿರುದ್ಧ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ತುಣುಕುಗಳನ್ನು ಒಳಗೊಂಡಿದೆ. ಜೊತೆಗೆ ಈ ಸರಣಿಯು ಮಾದಕವಸ್ತು ವಿರೋಧಿ ಸಂಸ್ಥೆಗಳನ್ನು ನಕಾರಾತ್ಮಕವಾಗಿ ಚಿತ್ರಿಸಿದೆ. ಇದರಿಂದಾಗಿ ಕಾನೂನು ಜಾರಿ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸ ಕುಸಿಯುತ್ತಿದೆ ಎಂದು ಹೇಳಿದ್ದಾರೆ. ಸಮೀರ್ ವಾಂಖೆಡೆ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದು, ಅದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ದೇಣಿಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ.
ನನ್ನ ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ವೆಬ್ ಸರಣಿಯನ್ನು ನಿರ್ಮಿಸಲಾಗಿದೆ. ಈ ಕುರಿತ ಪ್ರಕರಣಗಳು ಬಾಂಬೆ ಹೈಕೋರ್ಟ್ ಹಾಗೂ ಮುಂಬೈನ ಎನ್ ಡಿಪಿಎಸ್ ವಿಶೇಷ ನ್ಯಾಯಾಲಯಗಳಲ್ಲಿ ಇನ್ನೂ ವಿಚಾರಣೆಯಲ್ಲಿವೆ. ಈ ಸರಣಿಯೊಂದರಲ್ಲಿ “ಸತ್ಯಮೇವ ಜಯತೇ” ಎಂಬ ಘೋಷಣೆಯನ್ನು ಉಚ್ಚರಿಸಿದ ನಂತರ ಮಧ್ಯದ ಬೆರಳನ್ನು ತೋರಿಸುವ ಮೂಲಕ ಅಶ್ಲೀಲ ಸನ್ನೆ ಮಾಡಲಾಗಿದೆ. ಈ ಕೃತ್ಯವು 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ಕಾಯ್ದೆಯ ಗಂಭೀರ ಉಲ್ಲಂಘನೆಯಾಗಿದ್ದು, ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.