ಮುಕ್ತ, ಪಾರದರ್ಶಕ ಮತ ಎಣಿಕೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ
ಚುನಾವಣಾ ಆಯೋಗ | PTI
ಹೊಸದಿಲ್ಲಿ : ಲೋಕಸಭೆ ಚುನಾವಣೆಯ ಮತ ಎಣಿಕೆಯನ್ನು ‘‘ಮುಕ್ತ ಹಾಗೂ ಪಾರದರ್ಶಕ’’ವಾಗಿ ನಡೆಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ರವಿವಾರ ಭಾರತದ ಚುನಾವಣಾ ಆಯೋಗಕ್ಕೆ ಬಹಿರಂಗ ಪತ್ರ ಬರೆದಿದೆ.
ಲೋಕಸಭೆ ಚುನಾವಣೆಯ 7 ಹಂತದ ಮತದಾನದ ಮತ ಎಣಿಕೆ ಜೂನ್ 4ರಂದು ನಡೆಯಲಿದೆ.
ಈಗ ಹಿಂಪಡೆಯಲಾದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಬಹಿರಂಗ ಪತ್ರದಲ್ಲಿ, ಮತ ಎಣಿಕೆಯ ಪ್ರಕ್ರಿಯೆಯನ್ನು ತಿರುಚುವ ಕುರಿತು ತಾವು ಆತಂಕ ಹೊಂದಿರುವುದಾಗಿ ಹೇಳಿದೆ.
‘‘ಈಗಿರುವ ಆಡಳಿತಕ್ಕೆ ಸಹಾಯ ಮಾಡುವುದಕ್ಕಾಗಿ ಜನರ ತೀರ್ಪನ್ನು ಬುಡಮೇಲು ಮಾಡಲು ಮತ ಎಣಿಕೆ ಪ್ರಕ್ರಿಯೆಯನ್ನು ತಿರುಚುವ ಸಂಭವನೀಯತೆಯ ಕುರಿತು ನಮ್ಮ ಆತಂಕವನ್ನು ನಿಮ್ಮ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ’’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ಈ ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿರುವುದರಿಂದ ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಹಾಗೂ ಕಾರ್ಪೋರೇಟ್ ನೀತಿಯ ಬಹಿರಂಗದ ಕುರಿತು ಸಂಯುಕ್ತ ಕಿಸಾನ್ ಮೋರ್ಚಾದೊಂದಿಗಿನ ಲಿಖಿತ ಒಪ್ಪಂದವನ್ನು ಅನುಷ್ಠಾನಗೊಳಿಸುವಲ್ಲಿ ಬಿಜೆಪಿ ವಿಶ್ವಾಸ ದ್ರೋಹ ಎಸಗಿದೆ. ಆದುದರಿಂದ ಬಿಜೆಪಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭ ಸಂಯುಕ್ತ ಕಿಸಾನ್ ಮೋರ್ಚಾ ಅದನ್ನು ನೇರವಾಗಿ ವಿರೋಧಿಸಿದೆ ಎಂದು ಅದು ಹೇಳಿದೆ.
ಪ್ರಜಾಪ್ರಭುತ್ವ, ಜಾತ್ಯತೀತ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಲು ಹಾಗೂ ರೈತರು, ಕಾರ್ಮಿಕರು ಹಾಗೂ ಎಲ್ಲಾ ಬಡ ವರ್ಗದವರ ಜೀವನದ ಸಮಸ್ಯೆಗಳನ್ನು ಮಂದೆ ತರಲು ಭಾರತದ ರೈತರ 40ಕ್ಕೂ ಅಧಿಕ ಒಕ್ಕೂಟಗಳ ಸಂಯುಕ್ತ ಕಿಸಾನ್ ಮೋರ್ಚಾದ ಸಾಮೂಹಿಕ ಹಾಗೂ ಶಾಂತಿಯುತ ಪ್ರತಿಭಟನೆ ನೆರವು ನೀಡಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪತ್ರದಲ್ಲಿ ಹೇಳಿದೆ.