ಆರ್.ಜಿ.ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಗೆ ಜಾಮೀನು
ಸಂದೀಪ್ ಘೋಷ್ | PC : PTI
ಹೊಸದಿಲ್ಲಿ : ಕಿರಿಯ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಂಬಧಿಸಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜ್‌ನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರಿಗೆ ಸಿಯಾಲ್ ದಹ್ ನ್ಯಾಯಾಲಯವು ಶುಕ್ರವಾರ ಜಾಮೀನು ಬಿಡುಗಡೆಗೊಳಿಸಿದೆ. ಅವರ ಜೊತೆಗೆ ತಾಲಾ ಪೊಲೀಸ್ ಠಾಣೆಯ ಮಾಜಿ ಉಸ್ತುವಾರಿ ಅಧಿಕಾರಿ ಅಭಿಜಿತ್ ಮೊಂಡಾಲ್ ಅವರಿಗೂ ಜಾಮೀನು ನೀಡಲಾಗಿದೆ.
90 ದಿನಗಳ ಅವಧಿಯೊಳಗೆ ದೋಷಾರೋಪಟ್ಟಿ ಸಲ್ಲಿಸಲು ಕೇಂದ್ರೀಯ ತನಿಖಾ ಸಂಸ್ಥೆ ( ಸಿಬಿಐ) ವಿಫಲವಾದ ಹಿನ್ನೆಲೆಯಲ್ಲಿ ಇವರಿಬ್ಬರಿಗೂ ಜಾಮೀನು ಬಿಡುಗಡೆ ದೊರೆತಿದೆ. ಆರ್.ಜಿ.ಕರ್ ವೈದ್ಯಕೀಯ ಕಾಲೇಜ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸದಿರಲು ಹಿರಿಯ ನ್ಯಾಯವಾದಿ ವೃಂದಾ ಗ್ರೋವರ್ ನಿರ್ಧರಿಸಿದ ಬೆನ್ನಲ್ಲೇ ಈ ಬೆಳವಣಿಗೆಯುಂಟಾಗಿದೆ.
ಆರ್.ಜಿ.ವೈದ್ಯಕೀಯ ಕಾಲೇಜ್‌ನ ಹೃದ್ರೋಗ ವಿಭಾಗದ ಸಭಾಭವನದಲ್ಲಿ ಆಗಸ್ಟ್ 10ರಂದು ತರಬೇತಿ ನಿರತ ವೈದ್ಯೆಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾಗೈದು, ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿತ್ತು. ಸಾಮಾಜಿಕ ಕಾರ್ಯಕರ್ತ ಸಂಜಯ್ ರಾಯ್ ಎಂಬಾತ ಆಗಸ್ಟ್ 9-10ರ ನಡುವೆ ಈ ಕೃತ್ಯವನ್ನು ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು ಹಾಗೂ ಆತನನ್ನು ಬಂಧಿಸಲಾಗಿದೆ.
ಆದರೆ ಪ್ರಕರಣದ ತನಿಖೆಯನ್ನು ವಿಳಂಬಿಸುವಂತೆ ಮಾಡಿದ್ದಕ್ಕಾಗಿ ಸಂದೀಪ್ ಘೋಷ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೆ ಅವರ ಅಧಿಕಾರಾವಧಿಯಲ್ಲಿ ಆಸ್ಪತ್ರೆಯಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆಗೆ ಆದೇಶಿಸಿತ್ತು.