×
Ad

ಒಂದೇ ದಿನ ಸರ್ಫರಾಝ್, ಮುಶೀರ್ ಖಾನ್ ಶತಕ

Update: 2024-01-26 21:36 IST

ಸರ್ಫರಾಝ್, ಮುಶೀರ್ ಖಾನ್ | Photo: timesofindia.indiatimes.com

ಮುಂಬೈ: ತಂದೆಯಾಗಿ ಹಾಗೂ ತರಬೇತುದಾರರಾಗಿ ನೌಶಾದ್ ಖಾನ್ ಪಾಲಿಗೆ ಗುರುವಾರ ಆಗಿರುವ ಸಂತೋಷ ಹಾಗೂ ಹೆಮ್ಮೆಯನ್ನು ವರ್ಣಿಸಲು ಅಸಾಧ್ಯವಾಗಿದೆ. ಗುರುವಾರ ನೌಶಾದ್ ಹಾಗೂ ಅವರ ಕುಟುಂಬಕ್ಕೆ ಮರೆಯಲಾರದ ದಿನವಾಗಿತ್ತು.

ಅಹ್ಮದಾಬಾದ್ ನಲ್ಲಿ ನೌಶಾದ್ ಹಿರಿಯ ಪುತ್ರ 26ರ ಹರೆಯದ ಸರ್ಫರಾಝ್ ಖಾನ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ 18 ಬೌಂಡರಿ, 5 ಸಿಕ್ಸರ್ಗಳ ಸಹಾಯದಿಂದ 160 ಎಸೆತಗಳಲ್ಲಿ 161 ರನ್ ಗಳಿಸಿದರು. ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಕ್ಕೆ ಆಯ್ಕೆಗಾರರು ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ರನ್ನು ಆಯ್ಕೆ ಮಾಡಿದ್ದಾರೆ. ಟೀಮ್ ಇಂಡಿಯಾಕ್ಕೆ ಮತ್ತೊಮ್ಮೆ ಕಡೆಗಣಿಸಲ್ಪಟ್ಟರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಫರಾಝ್ ಇಂಗ್ಲೆಂಡ್ ವೇಗಿಗಳಾದ ಮ್ಯಾಥ್ಯೂ ಪಾಟ್ಸ್ ಹಾಗೂ ಬ್ರೆಂಡನ್ ಕಾರ್ಸ್ ದಾಳಿಯನ್ನು ಪುಡಿಗಟ್ಟಿದರು.

7,625 ಕಿ.ಮೀ. ದೂರದಲ್ಲಿ, ದಕ್ಷಿಣ ಆಫ್ರಿಕಾ ನೆಲದಲ್ಲಿ ಸರ್ಫರಾಝ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಅಂಡರ್-19 ವಿಶ್ವಕಪ್ ನಲ್ಲಿ ಭಾರತದ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು ಐರ್ಲ್ಯಾಂಡ್ ವಿರುದ್ಧ ಶತಕ(118 ರನ್, 106 ಎಸೆತ, 9 ಬೌಂಡರಿ, 4 ಸಿಕ್ಸರ್)ಸಿಡಿಸಿದ್ದರು.

ಒಂದೇ ಸಮಯದಲ್ಲಿ ಇಬ್ಬರು ಪುತ್ರರು ಬ್ಯಾಟಿಂಗ್ ನಲ್ಲಿ ಮಿಂಚುತ್ತಿದ್ದಾಗ ತಂದೆ ನೌಶಾದ್ ಗೆ ಇಬ್ಬರ ಪ್ರದರ್ಶನ ನೋಡಲು ಸಮಯ ಸಿಗದೆ ಚಡಪಡಿಸಿದರು.

2022ರ ಆವೃತ್ತಿಯಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿರುವ ಸರ್ಫರಾಝ್ ಗೆ ಲಭಿಸಿರುವ ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿಯನ್ನು ಸರ್ಫರಾಝ್ ಪರವಾಗಿ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ಸ್ವೀಕರಿಸಲು ನಾನು ಹೈದರಾಬಾದ್ ಗೆ ತೆರಳಿದ್ದೆ. ನಾನು ಲಕ್ನೊದಲ್ಲಿ ವಿಮಾನ ಏರಿದಾಗ ಸರ್ಫರಾಝ್ ಔಟಾಗದೆ 145 ರನ್ ಹಾಗೂ ಮುಶೀರ್ 45 ರನ್ ಗಳಿಸಿದ್ದರು. ನನ್ನ ಮೊಬೈಲ್ ನಲ್ಲಿ ಮುಶೀರ್ ಬ್ಯಾಟಿಂಗ್ ನೋಡುತ್ತಿದ್ದೆ. ಸರ್ಫರಾಝ್ ಸ್ಕೋರನ್ನು ನನ್ನ ಸ್ನೇಹಿತನ ಮೊಬೈಲ್ ನಲ್ಲಿ ವೀಕ್ಷಿಸಿದೆ. ವಿಮಾನದಲ್ಲಿದ್ದಾಗ ಮುಶೀರ್ ಶತಕವನ್ನು ವೀಕ್ಷಿಸುವುದರಿಂದ ವಂಚಿತನಾಗಿದ್ದೆ ಎಂದು ನೌಶಾದ್ ಹೇಳಿದ್ದಾರೆ.

ನನಗೆ ತುಂಬಾ ಖುಷಿಯಾಗಿದೆ. ನನ್ನ ಇಬ್ಬರು ಪುತ್ರರಿಗೆ ಬೆಂಬಲಿಸಿರುವುದಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸಹಾಯಕ ಸಿಬ್ಬಂದಿ ಹಾಗೂ ಬಿಸಿಸಿಐನ ಎಲ್ಲ ಹಿತೈಷಿಗಳಿಗೆ ಧನ್ಯವಾದ ಹೇಳಲು ಬಯಸುವೆ. ಸರ್ಫರಾಝ್ ಗೆ ಪ್ರಶಸ್ತಿ ನೀಡಿದ ಹಾಗೆ ಮುಂದೊಂದು ದಿನ ಬಿಸಿಸಿಐ, ಟೀಮ್ ಇಂಡಿಯಾದ ಪರ ಆಡುವ ಅವಕಾಶವನ್ನು ನೀಡಲಿದೆ ಎಂಬ ವಿಶ್ವಾಸ ನನಗಿದೆ ಎಂದು ನೌಶಾದ್ ಹೇಳಿದ್ದಾರೆ.

ಇದೇ ವೇಳೆ ಸರ್ಫರಾಝ್ ಭಾರತ ಎ ಪರ ದೇಶೀಯ ಕ್ರಿಕೆಟ್ ನಲ್ಲಿ ತನ್ನ ಸ್ಥಿರ ಪ್ರದರ್ಶನ ಮುಂದುವರಿಸಿದ್ದು, ದಕ್ಷಿಣ ಆಫ್ರಿಕಾದಲ್ಲಿ ನಡೆದ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲೂ ಶತಕ ಗಳಿಸಿದ್ದರು. ಮತ್ತೊಂದೆಡೆ 18ರ ಹರೆಯದ ಮುಶೀರ್ ಆಲ್ರೌಂಡರ್ ಆಗಿ ತನ್ನ ಪಯಣವನ್ನು ಈಗಷ್ಟೇ ಆರಂಭಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಅಂಡರ್-19 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ 3 ರನ್ ಗಳಿಸಿದ್ದ ಮುಶೀರ್ ಬೌಲಿಂಗ್ ನಲ್ಲಿ 35 ರನ್ ಗೆ 2 ವಿಕೆಟ್ ಪಡೆದಿದ್ದರು.

ನಾನು ಇಬ್ಬರೂ ಮಕ್ಕಳನ್ನು ಮುಂಬೈನ ಕ್ರಾಸ್ ಮೈದಾನ ಹಾಗೂ ನಾವು ವಾಸವಿರುವ ಕುರ್ಲಾದಲ್ಲಿ ಒಟ್ಟಿಗೆ ಅಭ್ಯಾಸ ಮಾಡಿಸಿರುವೆ. ಮುಶೀರ್ ಬ್ಯಾಟ್ ಹಾಗೂ ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾನೆ. ನನ್ನ ಇಬ್ಬರೂ ಮಕ್ಕಳಿಗೆ ಅವರ ಆಟದ ಮೇಲೆ ಗಮನಹರಿಸಿ ದೇವರಲ್ಲಿ ನಂಬಿಕೆ ಇಡುವಂತೆ ಹೇಳಿದ್ದೇನೆ. ಅವರ ಶ್ರಮಕ್ಕೆ ತಕ್ಕ ಫಲ ಸಿಗಲಿದೆ ಎಂದು ನೌಶಾದ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News