×
Ad

ಹಜ್‌ ಯಾತ್ರಾರ್ಥಿಗಳಿದ್ದ ಸೌದಿ ಏರ್‌ ಲೈನ್ಸ್‌ ವಿಮಾನದ ಟೈರ್‌ ನಲ್ಲಿ ಲ್ಯಾಂಡಿಂಗ್‌ ವೇಳೆ ಬೆಂಕಿ; ಲಕ್ನೋದಲ್ಲಿ ತಪ್ಪಿದ ಭಾರೀ ದುರಂತ

Update: 2025-06-16 18:54 IST

PC : X \ @TheNationalBul1

ಲಕ್ನೋ: ಹಜ್ ಯಾತ್ರಿಕರನ್ನು ವಾಪಾಸ್ ಕರೆತರುತ್ತಿದ್ದ ಸೌದಿ ಏರ್ಲೈನ್ಸ್ ವಿಮಾನದ ಚಕ್ರದಲ್ಲಿ ಲ್ಯಾಂಡಿಂಗ್‌ ವೇಳೆ ಬೆಂಕಿ ಕಾಣಿಸಿಕೊಂಡ ಆಘಾತಕಾರಿ ಘಟನೆ ಲಕ್ನೋದ ಚೌಧರಿ ಚರಣ್‌ ಸಿಂಗ್‌ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.

ರಕ್ಷಣಾ ತಂಡದ ಸಕಾಲಿಕ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಹಜ್ ಯಾತ್ರಿಕರನ್ನು ಕರೆತರುತ್ತಿದ್ದ ಸೌದಿ ಏರ್ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ರವಿವಾರ ರಾತ್ರಿ 10:45ಕ್ಕೆ ಸೌದಿ ಅರೇಬಿಯಾ ಏರ್ಲೈನ್ಸ್ ವಿಮಾನವು ಜಿದ್ದಾದಿಂದ 250 ಹಜ್ ಯಾತ್ರಿಕರನ್ನು ಹೊತ್ತು ಲಕ್ನೋ ಗೆ ಬರುತ್ತಿತ್ತು.

ಸೋಮವಾರ ಬೆಳಿಗ್ಗೆ ಲಕ್ನೋದ ಚೌಧರಿ ಚರಣ್‌ ಸಿಂಗ್‌ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ವಿಮಾನದ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿ ಆತಂಕದ ಕ್ಷಣ ಸೃಷ್ಟಿಯಾಯಿತು. ತಕ್ಷಣ ಎಚ್ಚೆತ್ತ ಪೈಲೆಟ್ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಗೆ ಮಾಹಿತಿ ನೀಡಿ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ತಂಡವು ಕೇವಲ 20 ನಿಮಿಷದಲ್ಲಿ ಬೆಂಕಿ ನಂದಿಸಿ ಸಂಭವನೀಯ ದುರಂತವನ್ನು ತಪ್ಪಿಸಿದ್ದಾರೆ.

ಟೈರ್‌ ಗೆ ಬೆಂಕಿ ಹತ್ತಿಕೊಳ್ಳಲು ಕಾರಣವೇನು?

ವಿಮಾನದ ಟೈರ್‌ ನಲ್ಲಿ ಬೆಂಕಿ ಹತ್ತಿಕೊಳ್ಳಲು ತಾಂತ್ರಿಕ ಸಮಸ್ಯೆಯೇ ಕಾರಣ ಎನ್ನಲಾಗಿದೆ.

ಲ್ಯಾಂಡಿಂಗ್ ಆಗುವ ವೇಳೆ ಹೈಡ್ರಾಲಿಕ್ ಸಿಸ್ಟಮ್ ನಲ್ಲಿ ಸೋರಿಕೆಯಾಗಿದ್ದೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಟೇಕ್ ಆಫ್ ಆದ ಬಳಿಕ ಈ ಸಮಸ್ಯೆ ಬರುತ್ತಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ವೈಮಾನಿಕ ತಜ್ಞರು ವಿಶ್ಲೇಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News