ಬ್ಯಾಗೇಜ್ ನಾಪತ್ತೆ: ಪ್ರಯಾಣಿಕಳಿಗೆ 1.25 ಲಕ್ಷ ರೂ. ಪರಿಹಾರ ನೀಡುವಂತೆ ಫ್ಲೈನಾಸ್ ಏರ್‌ಲೈನ್ಸ್‌ಗೆ ಆದೇಶ
ಫ್ಲೈನಾಸ್ ಏರ್‌ಲೈನ್ಸ್ | PC : X \ @AirbusPRESS
ಮುಂಬೈ: ಪ್ರಯಾಣಿಕರೊಬ್ಬರ ಬ್ಯಾಗೇಜ್ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ಯಾಗೇಜ್ ಕಳೆದುಕೊಂಡಿರುವ ಪ್ರಯಾಣಿಕಳಿಗೆ 1.25 ಲಕ್ಷ ರೂ. ಪರಿಹಾರ ನೀಡುವಂತೆ ಸೌದಿ ಅರೇಬಿಯಾ ಮೂಲದ ಅಗ್ಗದ ದರದ ವಿಮಾನ ಯಾನ ಸಂಸ್ಥೆಯಾದ ಫ್ಲೈನಾಸ್ ಏರ್‌ಲೈನ್ಸ್‌ಗೆ ಗ್ರಾಹಕ ಆಯೋಗವೊಂದು ನಿರ್ದೇಶನ ನೀಡಿದೆ.
ಈ ಕುರಿತು ವಿಚಾರಣೆ ನಡೆಸಿದ ಮುಂಬೈ(ಉಪನಗರ)ನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು, "ವಿಮಾನ ಯಾನ ಸಂಸ್ಥೆಯು ಕಳೆದು ಹೋಗಿರುವ ಬ್ಯಾಗೇಜ್ ಅನ್ನು ಪತ್ತೆ ಹಚ್ಚದಿರಲು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಿದೆ" ಎಂದು ತನ್ನ ಇತ್ತೀಚಿನ ಆದೇಶದಲ್ಲಿ ಅಭಿಪ್ರಾಯ ಪಟ್ಟಿದೆ.
ದೂರುದಾರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಡಿಸೆಂಬರ್ 23, 2023ರಿಂದ ಜನವರಿ 3, 2024ರ ನಡುವೆ ಮುಂಬೈನಿಂದ ತುರ್ಕಿಯಾಗೆ ಪ್ರವಾಸಕ್ಕೆ ತೆರಳಿದ್ದರು. ಇದರೊಂದಿಗೆ ಮುಂಬೈಗೆ ಮರಳುವ ವಿಮಾನವನ್ನು ಇಸ್ತಾನ್ ಬುಲ್‌ನಿಂದ ರಿಯಾದ್ ಸಂಪರ್ಕ ವಿಮಾನದೊಂದಿಗೆ ಮುಂಗಡ ಕಾಯ್ದಿರಿಸಿದ್ದರು. ಇದಾದ ಬಳಿಕ, ನಾನು ಇಸ್ತಾನ್ ಬುಲ್ ವಿಮಾನ ನಿಲ್ದಾಣದಲ್ಲಿ ಐದು ಬ್ಯಾಗೇಜ್ ಗಳನ್ನು ಪರಿಶೀಲನೆಗಾಗಿ ಹಸ್ತಾಂತರಿಸಿದ್ದೆ ಎಂದು ದೂರುದಾರರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
ಆದರೆ, ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗಳು ಕೇವಲ ನಾಲ್ಕು ಬ್ಯಾಗೇಜ್ ಗಳಿಗೆ ಮಾತ್ರ ಟ್ಯಾಗ್ ಲಗತ್ತಿಸಿ, ಐದನೆಯ ಬ್ಯಾಗೇಜ್ ಗೆ ಯಾವುದೇ ಟ್ಯಾಗ್ ಲಗತ್ತಿಸದೆ, ಕನ್ವೇಯರ್ ಬೆಲ್ಟ್ ಮೂಲಕ ಹಾದು ಹೋಗಲು ಅವಕಾಶ ನೀಡಿದ್ದರು ಎಂದೂ ಅವರು ಆರೋಪಿಸಿದ್ದರು.
ನನಗೆ ಮ್ಯಾನ್ಯುಯಲ್ ಟ್ಯಾಗ್ ಹಸ್ತಾಂತರಿಸಿದ್ದ ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗಳು, ನೀವು ತಲುಪಬೇಕಿರುವ ಗಮ್ಯ ಸ್ಥಾನಕ್ಕೆ ಎಲ್ಲ ಬ್ಯಾಗೇಜ್ ಗಳೂ ತಲುಪಲಿವೆ ಎಂದು ಭರವಸೆ ನೀಡಿದ್ದರು. ಆದರೆ, ನಾನು ಮುಂಬೈ ವಿಮಾನ ನಿಲ್ದಾಣದಲ್ಲಿ ನಾಲ್ಕು ಬ್ಯಾಗೇಜ್ ಗಳನ್ನು ಮಾತ್ರ ಸ್ವೀಕರಿಸಿದ್ದೆ ಎಂದು ಅವರು ತಮ್ಮ ದೂರಿನಲ್ಲಿ ಆಪಾದಿಸಿದ್ದರು.
ಈ ಕುರಿತು ವಿಮಾನ ಯಾನ ಸಂಸ್ಥೆಗೆ ದೂರುದಾರರು ವಿವಿಧ ಮಾಧ್ಯಮಗಳ ಮೂಲಕ ಹಲವು ಬಾರಿ ದೂರು ನೀಡಿದರೂ, ವಿಮಾನ ಯಾನ ಸಂಸ್ಥೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿರಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ಅವರು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು ಎಂದು ವರದಿಯಾಗಿದೆ.