370ನೇ ವಿಧಿ ರದ್ದತಿ ಪ್ರಶ್ನಿಸಿ ಅರ್ಜಿ: ಅರ್ಜಿದಾರರ ಪಟ್ಟಿಯಿಂದ ಶೆಹ್ಲಾ ರಶೀದ್, ಶಾ ಫೈಸಲ್ ಹೆಸರು ಕೈಬಿಟ್ಟ ಸುಪ್ರೀಂಕೋರ್ಟ್
ಶಾ ಫೈಸಲ್ / ಶೆಹ್ಲಾ ರಶೀದ್ (Photo : PTI)
ಹೊಸದಿಲ್ಲಿ: 370ನೇ ವಿಧಿ ರದ್ದತಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿಸಿ ಅದರ ಸ್ಥಾನಮಾನ ತಗ್ಗಿಸಿರುವುದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿದಾರರ ಪಟ್ಟಿಯಿಂದ ಹೋರಾಟಗಾರ್ತಿ ಶೆಹ್ಲಾ ರಶೀದ್ ಹಾಗೂ ಐಎಎಸ್ ಅಧಿಕಾರಿ ಶಾ ಫೈಸಲ್ ಅವರ ಹೆಸರನ್ನು ಕೈಬಿಡಲು ಮಂಗಳವಾರ ಸುಪ್ರೀಂಕೋರ್ಟ್ ಸಮ್ಮತಿಸಿದೆ ಎಂದು indianexpress.com ವರದಿ ಮಾಡಿದೆ.
370ನೇ ವಿಧಿ ರದ್ದತಿ ಕುರಿತ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ನ್ಯಾಯಪೀಠವು ಆಗಸ್ಟ್ 2ಕ್ಕೆ ಮುಂದೂಡಿದೆ. ವಿಚಾರಣೆಯು ಬೆಳಗ್ಗೆ 10.30 ಗಂಟೆಗೆ ಪ್ರಾರಂಭವಾಗಲಿದ್ದು, ದೈನಂದಿನ ಆಧಾರದಲ್ಲಿ ವಿಚಾರಣೆ ಮುಂದುವರಿಯಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವ ಸಾಂವಿಧಾನಿಕ ಆದೇಶ, 1954ಕ್ಕೆ ತಿದ್ದುಪಡಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರವು, ಆ ಆದೇಶವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುವ ಸಾಂವಿಧಾನಿಕ ಆದೇಶ, 2019ರ ಮೂಲಕ ವಿಸರ್ಜಿಸಿತ್ತು. ಈ ಆದೇಶದಲ್ಲಿ ಸಂವಿಧಾನದ ಎಲ್ಲ ಅವಕಾಶಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೂ ಅನ್ವಯವಾಗಲಿವೆ ಎಂದು ಹೇಳಲಾಗಿತ್ತು. 367ನೇ ವಿಧಿಗೂ ತಿದ್ದುಪಡಿ ತಂದು ಉಪ ವಾಕ್ಯ (4) ಅನ್ನು ಸೇರಿಸುವ ಮೂಲಕ ಭಾರತದ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೆ ನೇರವಾಗಿ ಅನ್ವಯವಾಗುವಂತೆ ಮಾಡಲಾಗಿತ್ತು.
370(3)ನೇ ವಿಧಿ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ ಎಲ್ಲ ವಿಧಿಗಳು ಅನ್ವಯವಾಗುವುದನ್ನು ಹೊರತುಪಡಿಸಿ ಉಳಿದೆಲ್ಲ ಉಪ ವಾಕ್ಯಗಳು ಸ್ಥಗಿತಗೊಳ್ಳಲಿವೆ ಎಂದು ಆಗಸ್ಟ್ 6, 2019ರಂದು ರಾಷ್ಟ್ರಪತಿಗಳು ಘೋಷಿಸಿದ್ದರು.