×
Ad

46 ವರ್ಷ ಹಳೆಯ ಕಾಲೇಜು ದೊಂಬಿ ಪ್ರಕರಣ: ತಪ್ಪಿತಸ್ಥನಿಗೇ ಶಿಕ್ಷೆ ಆಯ್ಕೆ ಅವಕಾಶ ನೀಡಿದ ಸುಪ್ರೀಂಕೋರ್ಟ್

Update: 2025-07-26 08:43 IST

Supreme Court (Credits: PTI)

ಹೊಸದಿಲ್ಲಿ: ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯ ಲೋಕಮಾನ್ಯ ಇಂಟರ್ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯ ವಿಷಯದಲ್ಲಿ 1979ರಲ್ಲಿ ನಡೆದ ಸಂಘರ್ಷದ ಪ್ರಕರಣದಲ್ಲಿ ತಪ್ಪಿತಸ್ಥನಿಗೆ 46 ವರ್ಷ ಬಳಿಕ ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಗಲಭೆ ಸಂದರ್ಭದಲ್ಲಿ 21 ವರ್ಷ ವಯಸ್ಸಿನವನಾಗಿದ್ದ ಹರಿಶಂಕರ್ ರಾಯ್, 19 ವರ್ಷದ ಕೃಷ್ಣ ಕುಮಾರ್ ಎಂಬಾತನನ್ನು ಇರಿದು 1979ರಲ್ಲಿ ತೀವ್ರ ಗಾಯಗೊಳಿಸಿದ್ದಾಗಿ ಆಪಾದಿಸಲಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣಕುಮಾರ್ ಚಿಕಿತ್ಸೆ ವೇಳೆ ಮೃತಪಟಿದ್ದ. ವಿಚಾರಣಾ ನ್ಯಾಯಾಲಯ 1983ರಲ್ಲಿ ಆರೋಪಿಯನ್ನು ತಪ್ಪಿತಸ್ಥ ಎಂದು ನಿರ್ಧರಿಸಿದ ಭಾರತೀಯ ದಂಡಸಂಹಿತೆ ಸೆಕ್ಷನ್ 304-ಐ ಅಡಿಯಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಸಂತ್ರಸ್ತನ ಸಾವಿಗೆ ಕಾರಣವಾದ ಅರೋಪಿಗೆ ಹತ್ಯೆ ಆರೋಪದಲ್ಲಿ ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ಸರ್ಕಾರ ಮಾಡಿಕೊಂಡ ಮೇಲ್ಮನವಿಯ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ 41 ವರ್ಷಗಳನ್ನು ತೆಗೆದುಕೊಂಡಿತು. ತನಗೆ ವಿಧಿಸಿದ ಶಿಕ್ಷೆ ವಿರುದ್ಧ ರಾಯ್ ಕೂಡಾ ಮೇಲ್ಮನವಿ ಸಲ್ಲಿಸಿದ್ದ. ಸೆಕ್ಷನ್ 302ರ ಅನ್ವಯ ಆರೋಪಿಗೆ ಶಿಕ್ಷೆ ವಿಧಿಸಲು ಅಗತ್ಯ ಪುರಾವೆ ಲಭ್ಯವಾದ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಕಳೆದ ವರ್ಷ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ರಾಯ್ ಇದರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ.

ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠ ಈ ಬಗ್ಗೆ ವಿಚಾರಣೆ ನಡೆಸಿ, 64 ವರ್ಷ ವಯಸ್ಸಿನ ರಾಯ್ ವಿರುದ್ಧದ ಶಿಕ್ಷೆಯನ್ನು ಸೆಕ್ಷನ್ 304-ಐ ಅಡಿಯ ಶಿಕ್ಷೆ ಎಂದು ಪರಿವರ್ತಿಸಿದರೂ ಕೇವಲ ನಾಲ್ಕು ವರ್ಷದ ಜೈಲು ಶಿಕ್ಷೆಯ ಮೂಲಕ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

67 ವರ್ಷದ ಆರೋಪಿ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಆತನ ಪತ್ನಿ ಕೂಡಾ ಕ್ಯಾನ್ಸರ್ಪೀಡಿತಳಾಗಿದ್ದಾಳೆ. ಆಕೆಯ ಆರೈಕೆಗಾಗಿ ಆರೋಪಿಗೆ ಕ್ಷಮೆ ನೀಡಬೇಕು ಎಂದು ಆರೋಪಿ ಪರ ವಕೀಲರು ಮನವಿ ಮಾಡಿದರು. ಆದರೆ ಆತನ ಮೇಲ್ಮನವಿಯ ವಿಚಾರಣೆಯನ್ನು ಮುಂದುವರಿಸಿದ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತು. ಆರೋಪಿಗೆ ಕ್ಷಮಾದಾನ ನೀಡಲು ನಿರಾಕರಿಸಿದ ಕೋರ್ಟ್, ಆರೋಪಿ ಒಪ್ಪಿಕೊಳ್ಳುವುದಾದಲ್ಲಿ ಜೀವಾವಧಿ ಶಿಕ್ಷೆಯ ಬದಲು ಸೆಕ್ಷನ್ 304-ಐ ಅಡಿಯಲ್ಲಿ ಏಳು ವರ್ಷದ ಜೈಲು ಶಿಕ್ಷೆ ವಿಧಿಸುವುದಾಗಿ ಸ್ಪಷ್ಟಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News